ರಸ್ತೆ ಸಾರಿಗೆ ಸಂಸ್ಥೆಯ ಖಾಲಿ ಹುದ್ದೆಗಳ ಭರ್ತಿಗೆ ಹಳೆಯ ಅಭ್ಯರ್ಥಿಗಳನ್ನು ಪರಿಗಣಿಸಿ

ಸಂಜೆವಾಣಿ ವಾರ್ತೆ,
ವಿಜಯಪುರ,ಜು.೧ : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಪರಿಗಣಿಸಬೇಕು ಎಂದು ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ವೇದಿಕೆ ಹೋರಾಟ ಸಮಿತಿಯು ಸಂಸದ ರಮೇಶ ಜಿಗಜಿಣಗಿ ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಅವರಿಗೆ ಮನವಿ ಸಲ್ಲಿಸಲಾಯಿತು.
ಹೋರಾಟ ಸಮಿತಿಯ ರಾಜ್ಯ ಸಂಚಾಲಕ ನ್ಯಾಯವಾದಿ ದಾನೇಶ ಅವಟಿ ಅವರ ನೇತೃತ್ವದಲ್ಲಿ ನೂರಾರು ಜನ ನೊಂದ ಅಭ್ಯರ್ಥಿಗಳು ಅವರ ಕಛೇರಿಗೆ ತೆರಳಿ ಸಂಸದ ರಮೇಶ ಜಿಗಜಿಣಗಿ ಹಾಗು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಮನವಿ ಸಲ್ಲಿಸಿ ತಮ್ಮ ಅಳಲನ್ನು ತೋಡಿಕೊಂಡರು. ಜಿಗಜಿಣಗಿ ಹಾಗೂ ಯತ್ನಾಳ ಅವರು ಮನವಿಗೆ ಸ್ಪಂದಿಸಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರ ಜೊತೆ ಖುದ್ದಾಗಿ ಮಾತನಾಡುವುದಲ್ಲದೆ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಈ ಹಿಂದೆ ಹೊರಡಿಸಲಾಗಿದ್ದ ಅಧಿಸೂಚನೆಯಲ್ಲಿ ಪ್ರಕಟವಾಗಿದ್ದ ೨೮೧೪ ಹುದ್ದೆಗಳನ್ನು ಸಂಪೂರ್ಣವಾಗಿ ಈ ಕೂಡಲೇ ಭರ್ತಿ ಮಾಡಿಕೊಳ್ಳಲು ಅವರಿಗೆ ತಿಳಿಸಬೇಕು. ಈ ರೀತಿ ಎಲ್ಲಾ ೨೮೧೪ ಪೂರ್ತಿ ಹುದ್ದೆಗಳಿಗೆ ನಮ್ಮನ್ನು ನೇಮಕಾತಿ ಮಾಡಿಕೊಂಡರೆ ತುಂಬಾ ಉಪಕಾರವಾಗುತ್ತದೆ ಎಂದು ಅವರು ತಮ್ಮ ಮನವಿ ಮಾಡಿಕೊಂಡರು. ವಾಯುವ್ಯ ಸಾರಿಗೆ ಸಂಸ್ಥೆಯವರು ಈಗ ಮತ್ತೆ ಹೊಸದಾಗಿ ೧೦೦೦ ಸಾವಿರ ಚಾಲಕ ಕಂ ನಿರ್ವಾಹಕ ಹುದ್ದೆಗಳನ್ನು ತುಂಬಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ವೃತ್ತಿ ಪರೀಕ್ಷೆಯಲ್ಲಿ ಪಾಸಾಗಿರುವ ಮತ್ತು ಕಂಡಕ್ಟರ್ ಲೈಸೆನ್ಸ್ ಕೂಡಾ ಹೊಂದಿರುವ ನಮ್ಮನ್ನೇ ಈ ಹುದ್ದೆಗಳಿಗೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಚಾಲಕ ಮತ್ತು ನಿರ್ವಾಹಕ ಹುದ್ದೆಗೆ ಕಳೆದ ಆರು ವರ್ಷಗಳಿಂದ ಅರ್ಜಿ ಸಲ್ಲಿಸಿ ನೌಕರಿಗಾಗಿ ಇಲಾಖೆಯ ಆದೇಶದ ದಾರಿ ಕಾಯುತ್ತಿರುವ ಸಾವಿರಾರು ಜನ ಅಭ್ಯರ್ಥಿಗಳು ಉತ್ತರ ಕರ್ನಾಟಕ ಭಾಗದ ನಿರುದ್ಯೋಗಿಯಾಗಿರುವ ನಮಗೆ ತೀವ್ರ ಅನ್ಯಾಯವಾಗಿದೆ. ಕಾರಣ ೦೬ ವರ್ಷದ ಹಿಂದೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿಯವರು ೧೦-೦೨-೨೦೨೯ ರಂದು ೨೦೮೧೪ ಚಾಲಕ ಮತ್ತು ನಿರ್ವಾಹಕ ಹುದ್ದೆಗೆ ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿತ್ತು. ಆಗ ೫೭ ಸಾವಿರ ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದೇವೆ. ೨೦೨೪ ರಲ್ಲಿ ನಮ್ಮ ಅರ್ಜಿಗಳನ್ನು ಇಲಾಖೆ ಆಯ್ಕೆ ಮಂಡಳಿ ವತಿಯಿಂದ ಪರಿಶೀ ಲಿಸಲಾಯಿತು. ನಂತರ ಅದೇ ವರ್ಷ ಫೆಬ್ರುವರಿ ಮಾರ್ಚನಲ್ಲಿ ಮಾನ್ಯಗೊಂಡ ಸುಮಾರು ೨೧ ಸಾವಿರ ಅಭ್ಯರ್ಥಿಗಳಿಗೆ ವೃತ್ತಿ ಚಾಲನಾ ಪರೀಕ್ಷೆ ನಡೆಸಿ ನಂತರ ೨೮೧೪ ಹುದ್ದೆಗಳ ಪೈಕಿ ದಿನಾಂಕ ೦೮-೦೬-೨೦೨೫ ರಂದು ಕೇವಲ ೧೦೦೦ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಜೂನ್ ೧೮ ರಂದು ೧೦೦೦ ಹುದ್ದೆಗಳಿಗೆ ಅಂತಿಮ ಆದೇಶ ಪತ್ರ ನೀಡಲಾಗಿದೆ ಎಂದು ನೊಂದ ಅಭ್ಯರ್ಥಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ನೊಂದ ಅಭ್ಯರ್ಥಿಗಳಾದ ಮಲ್ಲು ಗರಡೆ , ಮಲ್ಲಪ್ಪಾ ಅಲ್ಲಾಪೂರ, ಮೆಹಿಬೂಬ ಮುಲ್ಲಾ, ಪೈಗಂಬರ್ ಹಳ್ಳೂರ, ಬಸವರಾಜ ವಾಡಿ, ಸೂರ್ಯಕಾಂತ ಸಾತಲಗಾಂವ, ರಾಜಕುಮಾರ ಹೊಸಮನಿ, ಶಿವಾನಂದ ಹಂಚನಾಳ, ಸೋಮನಗೌಡ ಪಾಟೀಲ, ಮಲ್ಲಿಕಾರ್ಜುನ ಗಣತಿ, ಅನೀಲ ರಾಠೋಡ, ರೇವಣಸಿದ್ದ ಉಪ್ಪಲದಿನ್ನಿ, ಮಹೇಶ ಗೌಡಗಾಂವ, ರೇವಪ್ಪ ಕಾಶೆಟ್ಟಿ, ಇಬ್ರಾಹಿಂಸಾಬ, ಕಲ್ಲಪ್ಪ ಕಡಕೋಳ, ಮಲ್ಲಿಕಾರ್ಜುನ ಕಡಕೋಳ, ಶ್ರೀಕಾಂತ ವಾಗ್ಮೋರೆ, ದಯಾನಂದ ಚಾಳಿಕಾರ, ಮಂಜುನಾಥ ಬೇನೂರ ಸೇರಿದಂತೆ ಇನ್ನು ಅನೇಕರು ಇದ್ದರು.