ಸ್ಮಶಾನ ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ: ಪರಿಶಿಷ್ಟರ ಅಂತ್ಯ ಸಂಸ್ಕಾರಕ್ಕೆ ಪರದಾಟ

ಕೊರಟಗೆರೆ, ಜು. ೫- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸ್ಮಶಾನಕ್ಕೆ ಸರ್ಕಾರ ಭೂಮಿ ಮಂಜೂರು ಮಾಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ಮಶಾನ ಅಭಿವೃದ್ಧಿಯಾಗದೆ ಅಂತ್ಯ ಸಂಸ್ಕಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.


ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾ.ಪಂ ವ್ಯಾಪ್ತಿಯ ಸರ್ವೇ.ನಂ.೪೩ರಲ್ಲಿ ಪ.ಜಾತಿ ಮತ್ತು ಪ.ಪಂಗಡ ಸ್ಮಶಾನಕ್ಕೆ ೧೦ ಗುಂಟೆ, ಸಾರ್ವಜನಿಕ ಸ್ಮಶಾನಕ್ಕೆ ೧೦ ಗುಂಟೆ ಜಮೀನು ೨೦೧೮ ರಲ್ಲಿ ಮಂಜೂರು ಮಾಡಿದೆ. ೨೦೨೩-೨೪ರಲ್ಲಿ ಗ್ರಾಮ ಪಂಚಾಯ್ತಿಗೆ ಕಂದಾಯ ಇಲಾಖೆಯಿಂದ ಹಸ್ತಾಂತರವಾಗಿದೆ. ಆದರೂ ಈವರೆಗೂ ಗ್ರಾ.ಪಂ ಅಧಿಕಾರಿಗಳು ಸಾರ್ವಜನಿಕ ಸ್ಮಶಾನವನ್ನು ಅಭಿವೃದ್ಧಿಗೆ ಮೀನಾಮೇಷ ಎಣಿಸುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದರೂ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಲು ಗ್ರಾ.ಪಂ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬೈಚಾಪುರ ಗ್ರಾಮದಲ್ಲಿ ಕಳೆದ ೨೦೧೮ರಲ್ಲಿ ದಲಿತ ಕುಟುಂಬವೊಂದರಲ್ಲಿ ಸಾವಿನ ಘಟನೆ ನಡೆದಾಗ ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದ ಕಾರಣ ಮೃತದೇಹವನ್ನು ಗ್ರಾ.ಪಂ ಎದುರು ಇಟ್ಟು ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದ ತಹಶೀಲ್ದಾರ್ ಸ್ಥಳಕ್ಕೆ ಧಾವಿಸಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ತನ್ನ ಕುಟುಂಬದ ವ್ಯಕ್ತಿಯ ಅಂತ್ಯಕ್ರಿಯೆಗೆ ಸ್ಮಶಾನ ಕೊರತೆಯಿಂದ ಕಂದಾಯ ಇಲಾಖೆ, ಅರಣ್ಯ ಇಲಾಖೆ, ನರ್ಸರಿ ಪ್ರದೇಶದಲ್ಲಿನ ೨೦ ಗುಂಟೆ ಜಮೀನು ಸ್ಮಶಾನಕ್ಕೆಂದು ಮೀಸಲಿಟ್ಟು ಮಂಜೂರು ಮಾಡಿದ್ದರು, ಆದರೆ ೭ ವರ್ಷ ಕಳೆದರೂ ಸ್ಮಶಾನ ಇದುವರೆಗೂ ಅಭಿವೃದ್ಧಿಯಾಗಿಲ್ಲ.


ಅಧಿಕಾರಿಗಳ ಉಡಾಫೆ ಉತ್ತರ
೨೦೧೧ರ ಜನಗಣತಿ ಆಧಾರದ ಮೇಲೆ, ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೭೧ರ ಅಡಿಯಲ್ಲಿ ಜಿಲ್ಲಾಡಳಿತ ಬೈಚಾಪುರ ಗ್ರಾಮದ ಸರ್ಕಾರಿ ತೋಪು ಸರ್ವೇ.ನಂ.೪೩ರಲ್ಲಿ ಜಮೀನನ್ನು ಎಸ್ಸಿ, ಎಸ್ಟಿ ಸ್ಮಶಾನ ೧೦ ಗುಂಟೆ, ಸಾರ್ವಜನಿಕ ಸ್ಮಶಾನ ೧೦ ಗುಂಟೆ ಜಮೀನು ಮಂಜೂರು ಮಾಡಿದೆ. ಆದರೆ ಗ್ರಾ.ಪಂ ಅಧಿಕಾರಿಗಳು ಸದರಿ ಜಾಗವನ್ನು ಹಸ್ತಾಂತರ ಮಾಡಿಕೊಂಡು ಸಾರ್ವಜನಿಕರ ಬಳಕೆಗೆ ನೀಡಲು ನಿರ್ಲಕ್ಷ್ಯ ವಹಿಸಿದ್ದು, ಈ ಬಗ್ಗೆ ಗ್ರಾ.ಪಂ ಅಧಿಕಾರಿಗಳನ್ನು ಪ್ರಶ್ನಿಸಿದಾಗ ನಮಗೆ ಹಸ್ತಾಂತರವಾಗಿಲ್ಲ ಎಂಬ ಉಡಾಫೆ ಉತ್ತರ ನೀಡುತ್ತಿದ್ದು ಇವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.


ಗ್ರಾಮದ ಸ್ಮಶಾನದ ಬಗ್ಗೆ ತಹಶೀಲ್ದಾರ್ ಮಂಜುನಾಥ್ ಅವರನ್ನು ಸಂಪರ್ಕಿಸಿದಾಗ ಸ್ಥಳ ಪರಿಶೀಲಿಸಿ ಮಾಹಿತಿ ನೀಡುತ್ತೇನೆ ಎಂದು ಹೇಳುತ್ತಿದ್ದು ಇದು ಕಂದಾಯ ಇಲಾಖೆಯ ನಿರ್ಲಕ್ಷ್ಯವೋ, ಗ್ರಾ.ಪಂ ಆಡಳಿತ ವೈಫಲ್ಯವೋ ಎಂಬ ಅನುಮಾನ ಸಾರ್ವನಿಕರಲ್ಲಿ ಕಾಡುತ್ತಿದ್ದು ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಅಲ್ಲದೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಕೂಡಲೇ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಗ್ರಾ.ಪಂ. ಸದಸ್ಯ ವೆಂಕಟರೆಡ್ಡಿ ಮಾತನಾಡಿ, ೨೦೧೭-೧೮ರಲ್ಲಿ ಬೈಚಾಪುರ ಗ್ರಾಮದಲ್ಲಿ ಸ್ಮಶಾನ ಕೊರತೆಯಿಂದ ಮೃತರ ಅಂತ್ಯಕ್ರಿಯೆಗೆ ಪರದಾಡುವಂತಾಗಿತ್ತು. ಕಂದಾಯ ಇಲಾಖೆ ಸರ್ವೇ.ನಂ ೪೩ರಲ್ಲಿ ಸ್ಮಶಾನ ಮಂಜೂರು ಮಾಡಿತ್ತು ನಂತರ ೨೦೨೩-೨೪ರಲ್ಲಿ ಅಭಿವೃದ್ಧಿಗೆ ಮತ್ತು ನಿರ್ವಹಣೆಗೆ ಗ್ರಾ.ಪಂ ಹಸ್ತಾಂತರಿಸಿದೆ. ೫ ಲಕ್ಷ ಮೊತ್ತದ ನರೇಗಾ ಯೋಜನೆಯಡಿ ಕ್ರಿಯಾಯೋಜನೆ ಸಿದ್ದತೆ ಮಾಡಿಕೊಂಡಿದ್ದು, ಶೀಘ್ರದಲ್ಲಿ ಕಾಂಪೌಂಡ್, ನೆರಳಿನ ವ್ಯವಸ್ಥೆ, ನೀರಿನ ತೊಟ್ಟಿಗೆ ವ್ಯವಸ್ಥೆ ಕಲ್ಪಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದರು.


ದಲಿತ ಮುಖಂಡ ವೆಂಕಟೇಶ್ ಮಾತನಾಡಿ, ಸಾಮಾಜಿಕ ಅರಣ್ಯ ವಲಯ ಭೂಮಿಯಲ್ಲಿ ಪ.ಜಾತಿ ಮತ್ತು ಸಾರ್ವಜನಿಕರ ಸ್ಮಶಾನಕ್ಕೆಂದು ೨೦ಗುಂಟೆ ಭೂಮಿಯನ್ನು ಕಂದಾಯ ಇಲಾಖೆ ಮಂಜೂರು ಮಾಡಿ ಗ್ರಾ.ಪಂ.ಗೆ ಹಸ್ತಾಂತರಿಸಿ ಹಲವು ವರ್ಷಗಳೇ ಆಗಿದೆ. ಗ್ರಾಮ.ಪಂಚಾಯ್ತಿಯಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಈವರೆಗೂ ನಡೆದಿಲ್ಲ. ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಹಸ್ತಾಂತರವೇ ಆಗಿಲ್ಲ ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ. ದಲಿತ ಪರ ಸಂಘಟನೆಯು ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು.


ಗ್ರಾ.ಪಂ. ಮಾಜಿ ಸದಸ್ಯ ಹನುಮಂತರಾಯಪ್ಪ ಮಾತನಾಡಿ, ೨೦೧೦ರಲ್ಲಿ ಸ್ಮಶಾನ ಜಾಗದಲ್ಲಿ ಅರಣ್ಯ ಇಲಾಖೆ ನರ್ಸರಿ ನಡೆಸಲು ಮುಂದಾಗಿತ್ತು. ಗ್ರಾಮಸ್ಥರ ವಿರೋಧದಿಂದ ಸ್ಮಶಾನಕ್ಕೆಂದು ೨೦ಗುಂಟೆ ಜಮೀನನ್ನು ಕಂದಾಯ ಇಲಾಖೆ ಮಂಜೂರು ಮಾಡಿ ೨-೩ ವರ್ಷದಿಂದೆ ಗ್ರಾ.ಪಂ ಗೆ ಹಸ್ತಾಂತರಿಸಿದೆ. ಸ್ಮಶಾನದ ನಾಮಫಲಕ ಹಾಕಿಲ್ಲ, ಅಭಿವೃದ್ಧಿ ಕೆಲಸದತ್ತ ಗಮನಹರಿಸದೆ ಗ್ರಾ.ಪಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.