Home ಜಿಲ್ಲೆ ಬೆಂಗಳೂರು ಜನನಿ ಬಯೋಟೆಕ್‌ನಲ್ಲಿ ಜೀತ ಕಾರ್ಮಿಕರ ಕುರಿತು ಅಧಿಕಾರಿಗಳ ದಿಢೀರ್ ತಪಾಸಣೆ

ಜನನಿ ಬಯೋಟೆಕ್‌ನಲ್ಲಿ ಜೀತ ಕಾರ್ಮಿಕರ ಕುರಿತು ಅಧಿಕಾರಿಗಳ ದಿಢೀರ್ ತಪಾಸಣೆ

ಮಾಲೂರು, ಸೆ. ೨೪: ತಾಲ್ಲೂಕಿನ ಸೋಣಪ್ಪನಹಟ್ಟಿ ಗ್ರಾಮದ ಜನನಿ ಬಯೋಟೆಕ್‌ನಲ್ಲಿ ಅಸ್ಸಾಂ ಮೂಲದ ಮೂವರು ಕಾರ್ಮಿಕರನ್ನು ಜೀತ ಕಾರ್ಮಿಕರಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಕಾರ್ಮಿಕ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಿಢೀರ್ ತಪಾಸಣೆ ನಡೆಸಿದರು.


ಕೋಲಾರ ಉಪ ವಿಭಾಗಾಧಿಕಾರಿಗಳ ಸೂಚನೆಯ ಮೇರೆಗೆ ನಡೆದ ತಪಾಸಣೆಯಲ್ಲಿ ಅಸ್ಸಾಂ ಮೂಲದ ಮೂವರು ಕಾರ್ಮಿಕರು ಸಂಸ್ಥೆಯ ಆವರಣದಲ್ಲಿ ಪತ್ತೆಯಾಗಿದ್ದು, ಅಧಿಕಾರಿಗಳು ಅವರಿಂದ ಪ್ರತ್ಯೇಕವಾಗಿ ಹೇಳಿಕೆ ಪಡೆದು ದಾಖಲಿಸಿಕೊಂಡರು.


ಅಧಿಕಾರಿಗಳ ವಿಚಾರಣೆ ವೇಳೆ ಕಾರ್ಮಿಕರು ತಾವು ಮಾಸಿಕ ೨೦ ಸಾವಿರ ವೇತನ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ಸಂಸ್ಥೆಯಲ್ಲಿ ಇನ್ನು ಮುಂದೆ ಕೆಲಸ ಮುಂದುವರಿಸಲು ತಮ್ಮಿಗೆ ಇಚ್ಛೆಯಿಲ್ಲ ಎಂದು ಸ್ಪಷ್ಟಪಡಿಸಿ, ತಮ್ಮನ್ನು ಕೆಲಸದಿಂದ ಬಿಡುಗಡೆಗೊಳಿಸುವಂತೆ ಅಧಿಕಾರಿಗಳ ಮುಂದೆ ಮನವಿ ಮಾಡಿದ್ದಾರೆ.


ಕಾರ್ಮಿಕರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಸಂಸ್ಥೆಯ ಮಾಲೀಕರಿಗೆ ಈ ಕುರಿತು ತಿಳುವಳಿಕೆ ನೀಡಿ, ಮೂವರು ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಸ್ಥಳದಿಂದ ಕಳುಹಿಸಿಕೊಟ್ಟಿದ್ದಾರೆ.


ಜೀತ ಕಾರ್ಮಿಕ ಪದ್ಧತಿಯ ಕುರಿತು ದೂರು ಬಂದ ಹಿನ್ನೆಲೆ ಸಂಬಂಧಪಟ್ಟ ಇಲಾಖೆಗಳು ನಡೆಸಿದ ಈ ತಪಾಸಣೆ ಇದೀಗ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದೆ.


ಕಾರ್ಮಿಕರ ಸ್ವಾತಂತ್ರ್ಯ, ವೇತನ ಮತ್ತು ಕೆಲಸದ ಪರಿಸ್ಥಿತಿಗಳ ಕುರಿತು ದೂರುಗಳು ಬಂದಾಗ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವುದು ಅಗತ್ಯ ಎಂದು ಅಭಿಪ್ರಾಯವೂ ವ್ಯಕ್ತವಾಗಿದೆ. ಆದಾಗ್ಯೂ, ತಪಾಸಣೆಯ ವೇಳೆ ಕಾರ್ಮಿಕರು ನೀಡಿದ ಹೇಳಿಕೆ ಮತ್ತು ಅಧಿಕಾರಿಗಳ ಪರಿಶೀಲನೆಯ ಆಧಾರದ ಮೇಲೆಯೇ ಮುಂದಿನ ಕಾನೂನು ಕ್ರಮಗಳ ಸ್ವರೂಪ ನಿರ್ಧಾರವಾಗಬೇಕಿದೆ. ಜೀತ ಕಾರ್ಮಿಕ ಪದ್ಧತಿ ಕುರಿತು ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟ ಕಾನೂನುಗಳ ಅನ್ವಯ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.


ತಪಾಸಣೆ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿ ರೇಣುಕಾ ಪ್ರಸನ್ನ ಎಚ್.ಆರ್ ಹಾಗೂ ಕಂದಾಯ ಇಲಾಖೆ ಅಧಿಕಾರಿ ಮಂಜುನಾಥ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.