
ಹುಳಿಯಾರು, ಅ. ೨೯- ಇಲ್ಲಿನ ಪಟ್ಟಣ ಪಂಚಾಯ್ತಿ ಮುಂದೆ ವಾರದ ಸಂತೆ ಸ್ಥಳಾಂತರ ಸೇರಿದಂತೆ ಕಸ ವಿಲೇವಾರಿ ಘಟಕಕ್ಕೆ ಭೂಮಿ ಮಂಜೂರು, ಮೂಲ ಸೌಕರ್ಯಗಳ ಕೊರತೆ ನೀಗಿಸಲು ಒತ್ತಾಯಿಸಿ ೨೦ ದಿನಗಳಿಂದ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಮೊದಲ ಗೆಲುವು ಸಿಕ್ಕಿದೆ.
ಧರಣಿ ಸ್ಥಳಕ್ಕೆ ಅಧಿಕಾರಿಗಳ ದಂಡೇ ಆಗಮಿಸಿ ಧರಣಿ ನಿರತರ ಮನವೊಲಿಸುವ ಪ್ರಯತ್ನ ಮಾಡಿತ್ತು. ಆದರೆ ಧರಣಿ ನಿರತರು ಮಾತ್ರ ನಿಮಗೆ ಕಾಲಾವಕಾಶ ಕೊಟ್ಟು ಸಾಕಾಗಿದೆ. ನಿಮ್ಮ ಮಾತಿನ ಮೇಲೆ ನಮಗೆ ವಿಶ್ವಾಸ ಇಲ್ಲ. ನಮ್ಮ ಬೇಡಿಕೆಗಳು ಈಡೇರದ ವಿನಃ ಧರಣಿ ಹಿಂಪಡೆಯುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದರು.
ಹುಳಿಯಾರು ಬಸ್ ನಿಲ್ದಾಣ ಹಾಗೂ ವಾಲ್ಮೀಕಿ ಸರ್ಕಲ್‌ಗಳಲ್ಲಿ ಶೌಚಾಲಯಗಳು ನಿರ್ಮಾಣಗೊಂಡು ೬-೭ ತಿಂಗಳಾಗಿವೆ. ತಕ್ಷಣ ಅವುಗಳನ್ನು ಉದ್ಘಾಟಿಸಿ ಜನರಿಗೆ ಅನುಕೂಲ ಮಾಡಿಕೊಡಿ ಎಂದು ಧರಣಿಯ ಮೊದಲ ದಿನದಿಂದಲೂ ಹೇಳುತ್ತಿದ್ದೇವೆ. ಇನ್ನೂ ಉದ್ಘಾಟಿಸಲು ಮೀನಾಮೇಷ ಎಣಿಸುತ್ತೀದ್ದೀರಿ. ನೀವು ಉದ್ಘಾಟನೆ ಮಾಡದಿದ್ದರೆ ನಾವೇ ಬೀಗ ಹೊಡೆದು ಉದ್ಘಾಟನೆ ಮಾಡಿಕೊಳ್ಳುತ್ತೇವೆ ಎಂದರು. ಇದಕ್ಕೆ ಪೌರಾಡಳಿತ ಇಲಾಖೆಯ ಯೋಜನಾಧಿಕಾರಿ ಯೋಗಾನಂದ್, ಶೌಚಾಲಯ ಉದ್ಘಾಟನೆ ಮಾಡುತ್ತೇವೆ ಎಂದು ತಿಳಿಸಿ ಧರಣಿನಿರತರ ಬೇಡಿಕೆ ಈಡೇರಿಸಲು ಮುಂದಾದರು.
ಹುಳಿಯಾರಿನ ಉಪಮಾರುಕಟ್ಟೆಯಾದ ಚಿಕ್ಕನಾಯಕನಹಳ್ಳಿ ಎಪಿಎಂಸಿಯಲ್ಲಿ ವಾರದ ಸಂತೆ ನಡೆಯುತ್ತಿದೆ. ಹೀಗಿರುವಾಗ ಹುಳಿಯಾರು ಎಪಿಎಂಸಿಗೆ ಸಂತೆ ಶಿಫ್ಟ್ ಮಾಡಲು ಇರುವ ಕಾನೂನು ತೊಡಕಾದರೂ ಏನು ಎಂದು ಪ್ರಶ್ನಿಸಿದರು.
ತಹಶೀಲ್ದಾರ್ ಅವರು ಶಿಫ್ಟ್ ಮಾಡಬಹುದೆಂದು ವರದಿ ಕೊಟ್ಟಿದ್ದಾರೆ. ಶಾಸಕರೂ ಸಹ ಇದಕ್ಕೆ ಸಮ್ಮತಿಸಿದ್ದಾರೆ. ಹೀಗಿರುವಾಗ ಶಿಫ್ಟ್ ಮಾಡಲು ಇರುವ ಅಡ್ಡಿಯಾದರೂ ಏನು ಎಂದು ಖಾರವಾದರು. ಇದಕ್ಕೆ ಎಪಿಎಂಸಿ ಡಿಡಿ ಡಾ.ರಾಜಣ್ಣ ಅವರು, ಶಿಫಾರಸ್ಸು ಪತ್ರ ನನಗಿನ್ನೂ ಈಗ ತಲುಪಿದೆ. ಮೇಲಾಧಿಕಾರಿಗಳಿಗೆ ಕಳುಹಿಸಿ ಅವರಿಂದ ಅನುಮತಿ ಪಡೆಯಲು ಕಾಲಾವಕಾಶ ಬೇಕಿದೆ ಎಂದರು.
ತಂತ್ರಜ್ಞಾನ ಇಷ್ಟು ಮುಂದುವರಿದಿದ್ದರೂ ಇನ್ನೂ ಪತ್ರ ವ್ಯವಹಾರದಲ್ಲೇ ಇದ್ದೀರಲ್ಲ, ಇ-ಮೇಲ್ ನಲ್ಲಿ ಈಗಲೇ ಕಳುಹಿಸಿ ಒಪ್ಪಿಗೆ ಪಡೆಯಿರಿ ಎಂದು ಪಟ್ಟು ಹಿಡಿದು ಮೇಲ್ ಮಾಡಿಸಿದರು.
ಹುಳಿಯಾರು ಸಂತೆ ಎಪಿಎಂಸಿಗೆ ಶಿಫ್ಟ್ ಆಗಲು ಅಧಿಕಾರಿಗಳ ತಕರಾರು ಇಲ್ಲವೆಂದಾದ ಮೇಲೆ ಎಪಿಎಂಸಿ ಇರುವುದೇ ನಮಗಾಗಿ ಈ ವಾರದಿಂದಲೇ ರೈತರೇ ಶಿಫ್ಟ್ ಮಾಡಿಕೊಂಡು ವ್ಯಾಪಾರ ಮಾಡುತ್ತಾರೆ. ನಂತರದ ದಿನಗಳಲ್ಲಿ ನೀವು ಆಡಳಿತಾತ್ಮಕ ಅನುಮೂದನೆ ಕೊಡಿ ಎಂದರು.
ಆಗ ಮುಖ್ಯಾಧಿಕಾರಿ ಮಂಜುನಾಥ್, ಎಪಿಎಂಸಿಯಲ್ಲಿ ನೀವು ಜಾಗ ತೋರಿಸಿದರೆ ಮುಂದೆ ನಿಂತು ಕ್ಲೀನ್ ಮಾಡಿಸಿಕೊಡುವುದಾಗಿ ತಿಳಿಸುವ ಮೂಲಕ ಮುಂದಿನ ವಾರದಿಂದಲೇ ಸಂತೆ ಶಿಫ್ಟ್ ಮಾಡಲು ತೀರ್ಮಾನಿಸಲಾಯಿತು. ಅಲ್ಲದೆ ಹಾಲಿ ಸಂತೆ ಸ್ಥಳದ ಸುಂಕ ಸಂಗ್ರಹದ ಹರಾಜು ಕೂಗಿರುವ ಗುತ್ತಿಗೆದಾರರಿಗೆ ಹಣ ವಾಪಸ್ ಕೊಡುವಂತೆ ಧರಣಿ ನಿರತರು ಕೇಳಿಕೊಂಡರು. ಆಗ ಪಿಡಿ ಅವರು ಮುಖ್ಯಾಧಿಕಾರಿಗಳಿಗೆ ವಾಪಸ್ಸ್ ಕೊಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಹೊಸಹಳ್ಳಿ ಚಂದ್ರಣ್ಣ, ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಭಟ್ಟರಹಳ್ಳಿ ಮಲ್ಲಿಕಾರ್ಜುನ್, ಕರವೇ ಮೆಡಿಕಲ್ ಚನ್ನಬಸವಯ್ಯ, ಬೇಕರಿ ಪ್ರಕಾಶ್, ಗೌಡಿ, ಎದ್ದೇಳು ಕರ್ನಾಟಕದ ಎನ್.ಇಂದಿರಮ್ಮ, ಸುವರ್ಣಮುಖಿ ವಿದ್ಯಾ ಚೇತನದ ರಾಮಕೃಷ್ಣಪ್ಪ, ಮಹಿಳಾ ಸಂಘಟನೆಯ ಜಯಲಕ್ಷ್ಮಿ, ಕಾಮನಬಿಲ್ಲು ಫೌಂಡೇಷನ್‌ನ ಚನ್ನಕೇಶವ, ಪ.ಪಂ. ಸದಸ್ಯರುಗಳಾದ ಕೆಎಂಎಲ್‌ಕಿರಣ್, ಶೃತಿ, ರಾಜುಬಡಗಿ, ಜಹೀರ್ ಸಾಬ್, ಸಿದ್ದಿಕ್, ಜುಬೇರ್, ಮಾಜಿ ಸದಸ್ಯರಾದ ಎಲ್.ಆರ್.ಚಂದ್ರಶೇಖರ್, ರಾಘವೇಂದ್ರ, ಭಜರಂಗದಳದ ಬಸವರಾಜು, ಎಬಿವಿಪಿಯ ಗುರುಪ್ರಸಾದ್, ರೈತ ಸಂಘದ ಕರಿಯಣ್ಣ, ಮಲ್ಲೇಶಣ್ಣ, ನೀರಾಈರಣ್ಣ, ನಾಗರಾಜು, ಮಲ್ಲಿಕಾರ್ಜುನ್, ಪ್ರಶಾಂತ್ ಮತ್ತಿತರರು ಪಾಲ್ಗೊಂಡಿದ್ದರು.

































