ಸಾರ್ವಜನಿಕರ ಅರೋಗ್ಯ ರಕ್ಷಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ

ತುಮಕೂರು, ಡಿ. ೨೮- ಹಿರೇಹಳ್ಳಿ ಕೈಗಾರಿಕಾ ಪ್ರದೇಶ ವಿ ಬಿ ಎಸ್ ಪೆಟ್ರೋ ಕೆಮಿಕಲ್ ಕಂಪನಿಯ ತೈಲ ಉತ್ಪಾದನೆಯಿಂದಾಗುತ್ತಿರುವ ವಾಯುಮಾಲಿನ್ಯ ತಡೆಗಟ್ಟುವಂತೆ ಸಾಮಾಜಿಕ ಹೋರಾಟಗಾರ ವಿ ರವಿವರ್ಮ ರವರು ಪ್ರತಿಭಟನೆ ನೆಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.


ತಾಲ್ಲೂಕಿನಲ್ಲಿರುವ ಹಿರೇಹಳ್ಳಿ ಕೈಗಾರಿಕಾ ಪ್ರದೇಶ ವಿ ಬಿ ಎಸ್ ಪೆಟ್ರೋ ಕೆಮಿಕಲ್ ಕಂಪನಿ ಎದುರು ಪ್ರತಿಭಟನೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೈಲ ಉತ್ಪಾದನೆಯಿಂದ ಕೆಟ್ಟ ದುರ್ವಾಸನೆ ಬರುತ್ತಿದ್ದು ಸಿಂಗನಹಳ್ಳಿ ಕಾಲೋನಿಯ ಜಿ ಟಿ ಟಿ ಸಿ ಕಾಲೇಜಿನ ಸುಮಾರು ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪ್ರಾಥಮಿಕ ಶಾಲೆಯ ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸ್ಥಳೀಯ ಗ್ರಾಮದ ೧೫೦೦ ಕ್ಕೂ ಹೆಚ್ಚು ಸ್ಥಳೀಯ ನಾಗರಿಕರು ವಾಸವಿರುವ ಈ ಗ್ರಾಮಕ್ಕೆ ಕಂಪನಿಯ ಹಾಯಲ್ ಉತ್ವಾದನೆಯಿಂದ ವಾತಾವರಣ ಕಲುಷಿತಗೊಂಡು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಗ್ರಾಮಸ್ಥರಿಗೆ ಮತ್ತು ಇಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.


ವಿ ಬಿ ಎಸ್ ಪೆಟ್ರೋ ಕೆಮಿಕಲ್ ಕಂಪನಿಯಿಂದ ಆಗುತ್ತಿರುವ ವಾಯುಮಾಲಿನ್ಯ (ದುರ್ವಾಸನೆ )ದಿಂದ ತಲೆನೋವು, ವಾಂತಿ, ಶ್ವಾಶಕೊಶ ಸಮಸ್ಯೆ ಹೀಗೆ ಅನೇಕ ರೋಗಗಳಿಗೆ ದಾರಿ ಮಾಡಿಕೊಡುತ್ತಿದೆ. ಸ್ಥಳೀಯ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷಕ್ಕೆ ಸಮಸ್ಯೆ ಅತಿಯಾಗಿದೆ ಎಂದು ಸ್ಥಳಿಯ ಗ್ರಾಮಸ್ಥರು ತಮ್ಮ ಅಳಲು ತೋಡಿ ಕೊಂಡರು.


ಈ ಸಂದರ್ಭದಲ್ಲಿ ಸ್ಥಳೀಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳು , ಗ್ರಾಮಸ್ಥರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.