ಸಂಚಾರಿ ನಿಯಮ ಪಾಲನೆಯಿಂದ ಜೀವದ ಸಂರಕ್ಷಣೆ ಸಾಧ್ಯ

ಕಲಬುರಗಿ:ಜ.11: ಪ್ರತಿಯೊಬ್ಬರು ತಮ್ಮ ಜೀವ ಅಮೂಲ್ಯವಾಗಿದ್ದು ಅದರ ರಕ್ಷಣೆ ತುಂಬಾ ಅಗತ್ಯವಾಗಿದೆ. ನಿರ್ಲಕ್ಷ್ಯವಹಿಸಿ ವಾಹನ ಚಲಾಯಿಸುವುದು, ಸಂಚಾರಿ ನಿಯಮಗಳನ್ನು ಪಾಲಿಸದಿರುವುದರಿಂದ ಅನೇಕ ಅಪಘಾತಗಳು ಸಂಭವಿಸಿ ಪ್ರಾಣ ಕಳೆದುಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಆದ್ದರಿಂದ ಎಲ್ಲರು ಸಂಚಾರಿ ನಿಯಮಗಳನ್ನು ಪಾಲಿಸುವುದು ಅವಶ್ಯಕವಾಗಿದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಇಂದಿನ ಬಾಲಕರೆ, ನಾಳಿನ ನಾಗರಿಕರಾಗಿರುವದರಿಂದ ನಿರ್ಲಕ್ಷ್ಯ ಬೇಡ. ವಾಹನ ಚಲಾಯಿಸುವಾಗ ಮದ್ಯಪಾನ. ಧೂಮಪಾನ, ಮೋಬೈಲ್‍ನಲ್ಲಿ ಮಾತನಾಡುವುದು ಅಪಾಯವಾಗಿದೆ. ಯುವಕರು ಲೈಸನ್ಸ್ ಸೇರಿದಂತೆ ಎಲ್ಲಾ ದಾಖಲಾತಿಯನ್ನು ಹೊಂದಿರಬೇಕು. ಅತಿ ವೇಗದಿಂದ ಚಲಿಸುವುದು ಬೇಡ. ದ್ವಿಚಕ್ರದ ಮೇಲೆ ಇಬ್ಬರು ಮಾತ್ರ ಸವಾರಿ ಮಾಡಬೇಕು. ಹೆಲ್ಮೆಟ್ ಧರಿಸುವುದು, ರಸ್ತೆ ಎಡಬದಿಯಿಂದ ಚಲಿಸುವುದು, ರಸ್ತೆ ದಾಟುವಾಗ ಎರಡು ಕಡೆಯಿಂದ ವಾಹನಗಳನ್ನು ಗಮನಿಸಿ ಚಲಿಸಬೇಕು. ನಮ್ಮ ದೇಶದಲ್ಲಿ ಪ್ರತಿ ವರ್ಷ ಸುಮಾರು 1.5 ಲಕ್ಷ ಜನರು ನಿರ್ಲಕ್ಷತನದಿಂದ ವಾಹನ ಚಲಾಯಿಸಿ ಅಪಘಾತವಾಗಿ ಸಾವನ್ನಪ್ಪುತ್ತಿದ್ದಾರೆ. ಸ್ವತಃ ವಾಹನ ಸವಾರರು ಸಾವನಪ್ಪುವುದಲ್ಲದೆ, ಮತ್ತೊಬ್ಬರ ಪ್ರಾಣಕ್ಕೆ ಕೂಡಾ ತೊಂದರೆ ಮಾಡುತ್ತಾರೆ. ರಸ್ತೆ ಸಂಚಾರ ನಿಯಮಗಳ ಬಗ್ಗೆ ಎಲ್ಲೆಡೆ ವ್ಯಾಪಕವಾದ ಜನಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ರಸ್ತೆ ಸುರಕ್ಷಾ ಸಪ್ತಾಹ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡದ, ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಅಂಬರೀಶ್ ಬಿರಾದಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.