
ಕೋಲಾರ,ಜ,೨೭- ಸಂವಿಧಾನ ನೀಡಿರುವ ಹಕ್ಕುಗಳನ್ನು ಪಡೆಯುವುದು ಮಾತ್ರ ಮುಖ್ಯವಲ್ಲ, ಅದರಲ್ಲಿ ತಿಳಿಸಿರುವ ಕರ್ತವ್ಯಗಳನ್ನು ಪಾಲಿಸಬೇಕು, ದೇಶದ ಕಾನೂನುಗಳನ್ನು ಗೌರವಿಸಬೇಕು ಎಂದು ಕ್ರಿಬ್ಕೋ ರಾಜ್ಯ ಮಾರಾಟ ವ್ಯವಸ್ಥಾಪಕ ಎಂ.ಶ್ರೀನಿವಾಸಬಾಬು ಕರೆ ನೀಡಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ೭೭ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನೇಕ ನಾಯಕರ ಪರಿಶ್ರಮದಿಂದ ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ, ಅಂಬೇಡ್ಕರ್ ಅವರು ವಿಶ್ವವೇ ಮೆಚ್ಚುವ ಸಂವಿಧಾನ ನೀಡಿದ್ದಾರೆ ಎಂದರು.
ಪ್ರತಿಯೊಬ್ಬರೂ ನೆಮ್ಮದಿಯಿಂದ ಜೀವನ ನಡೆಸಲು ಅಗತ್ಯವಾದ ಕಾನೂನು ಸಂವಿಧಾನದಲ್ಲಿದೆ, ನಮಗೆ ಸಂವಿಧಾನ ಹಕ್ಕುಗಳ ಜತೆಗೆ ಕರ್ತವ್ಯಗಳನ್ನು ನೀಡಿದ್ದು, ಅದನ್ನು ಪಾಲಿಸಿ ಸತ್ಪ್ರಜೆಗಳಾಗಿ ಎಂದು ಕರೆ ನೀಡಿದರು.
ಹರಿದು ಹಂಚಿ ಹೋಗಿದ್ದ ಭಾರತವನ್ನು ಒಗ್ಗೂಡಿಸಿ, ನಮ್ಮದೇ ಸರ್ಕಾರ ರಚಿಸಿದ ಪವಿತ್ರವಾದ ಈ ದಿನವನ್ನು ಸ್ಮರಿಸೋಣ, ನಾವು ಸ್ವತಂತ್ರ ಪಡೆದು ನೆಮ್ಮದಿಯ ಜೀವನ ನಡೆಸಲು ದೇಶಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸೋಣ ಎಂದ ಅವರು, ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದಾಗಿದ್ದು, ನಮ್ಮ ಸಂವಿಧಾನ ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಮಕ್ಕಳಿಂದ ಪಥ ಸಂಚಲನ, ದೇಶಭಕ್ತಿಗೀತೆಗಳ ನೃತ್ಯ ವೈಭವ ಮನಸೂರೆಗೊಂಡಿತು.
ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಲೀಲಾ ನೇತೃತ್ವದಲ್ಲಿ ಮಕ್ಕಳಿಂದ ಧ್ವಜವಂದನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿಗೀತೆಗಳ ನೃತ್ಯಗಳು,ಸಾಮೂಹಿಕ ವ್ಯಾಯಾಮ ಮನಸೂರೆಗೊಂಡವು.
ಶಿಕ್ಷಕ ಭವಾನಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎ.ಶ್ರೀಧರ್, ಕ್ರಿಬ್ಕೋ ಕ್ಷೇತ್ರಾಧಿಕಾರಿ ಹರೀಶ್, ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ,ವೆಂಕಟರೆಡ್ಡಿ, ಶ್ವೇತಾ,ಸುಗುಣಾ, ಶ್ರೀನಿವಾಸಲು,ರಮಾದೇವಿ,ಚೈತ್ರಾ,ಅಡುಗೆ ಸಿಬ್ಬಂದಿ ನೇತ್ರಾವತಿ, ಜಮುನ,ಪವಿತ್ರ, ಸುಗುಣಾ ಬಿಎಡ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಮತ್ತಿತರರು ಹಾಜರಿದ್ದರು.


























