
ಬೀದರ, ನ.18: ಇತ್ತೀಚಿಗೆ ಆರೋಗ್ಯ, ಇಂಜಿನಿಯರರಿಂಗ್ ಸೇರಿದಂತೆ ಇತರೆ ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ಸೇವನೆ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದೆ, ಆದ್ದರಿಂದ ಅವರಿಗೆ ಸರಿದಾರಿಗೆ ತರಲು ಎಲ್ಲರೂ ಕಟಿಬದ್ಧರಾಗಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಹೇಳಿದರು.
ಅವರು ಸೋಮವಾರ ಬೀದರ ನಗರದ ಬ್ರಿಮ್ಸ್ ಸಭಾಂಗಣದಲ್ಲಿ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದೊಂದಿಗೆ ಸಂಯೋಜನೆಗೊಂಡಿರುವ ಬೀದರ ಜಿಲ್ಲೆಯ ಎಲ್ಲಾ ಮಹಾವಿದ್ಯಾಲಯಗಳ ಅಡಿಯಲ್ಲಿ ಆಯೋಜಿಸಿದ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದೊಂದಿಗೆ ಸಂಯೋಜನೆಗೊಂಡಿರುವ ಬೀದರ ಜಿಲ್ಲೆಯ ಎಲ್ಲಾ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಅಂಗಾಂಗ ದಾನ ಹಾಗೂ ನಶಾಮುಕ್ತ ಭಾರತ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಯುಕರು ಪ್ರತಿಭಾವಂತರಿದ್ದಾರೆ ಆದರೆ ದುರ್ಗುಣ- ದುಶ್ಚಟಗಳಿಗೆ ಬಲಿಯಾಗಿ ದಾರಿ ತಪ್ಪುತ್ತಿದ್ದಾರೆ ಅವರಿಗೆ ಸರಿದಾರಿಗೆ ತರವುದು ನಮ್ಮೆಲ್ಲರ ಕರ್ತವ್ಯವಾಗಿದೆ. “ನಶೆ ಸಮಾಜವನ್ನು ನಾಶಮಾಡುವ ಮಹಾವ್ಯಾಧಿ. ಯುವಜನತೆಗೆ ಮಾರ್ಗದರ್ಶನ ನೀಡುವುದು, ಕುಟುಂಬ-ಶಾಲೆ-ಸಮಾಜ ಎಲ್ಲವೂ ಜವಾಬ್ದಾರಿ ತೆಗೆದುಕೊಳ್ಳುವುದು ಅತ್ಯಗತ್ಯ. ನಶಾಮುಕ್ತ ಭಾರತವು ಕೇವಲ ಅಭಿಯಾನವಲ್ಲ ಇದು ಆರೋಗ್ಯಕರ, ಜಾಗೃತ ಮತ್ತು ಶಕ್ತಿಯುತ ರಾಷ್ಟ್ರ ನಿರ್ಮಾಣದ ದಿಕ್ಕು,” ಎಂದರು. .
“ಜೀವ ಉಳಿಸುವ ಅತ್ಯಂತ ಮಹತ್ವದ ಸೇವೆ ಎಂದರೆ ಅಂಗಾಂಗ ದಾನ. ಅರಿವು – ಶಿಕ್ಷಣ – ಪ್ರೇರಣೆಯ ಮೂಲಕ ಸಮಾಜದಲ್ಲಿ ದಾನಧರ್ಮದ ಮನೋಭಾವ ಬೆಳೆಸಬೇಕು. ಸರ್ಕಾರ ಮತ್ತು ಆರೋಗ್ಯ ಇಲಾಖೆಯು ಸಂಪೂರ್ಣ ಪಾರದರ್ಶಕ ವ್ಯವಸ್ಥೆಯನ್ನು ನಿರ್ಮಿಸಿ ಜನರಲ್ಲಿ ವಿಶ್ವಾಸ ಹೆಚ್ಚಿಸುವತ್ತ ಕೆಲಸ ಮಾಡುತ್ತಿದೆ.” ಎಂದು ಹೇಳಿದರು.
ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಅವರು ಮಾತನಾಡಿ, ಇತ್ತೀಚಿಗೆ ಯುವಕರು ದುಶ್ಚಟಗಳಿಗೆ ಬಲಿಯಾಗಿ ಅದರ ಗುಂಗಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ ಇದು ಅತ್ಯಂತ ದೊಡ್ಡ ದುರಂತ. ಅವರನ್ನು ಸರಿದಾರಿಗೆ ತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಭಗವಾನ್ ಬಿ.ಸಿ ಮಾತನಾಡಿ, ನಮ್ಮ ರಾಜೀವ ಗಾಂಧಿ ಆರೋಗ್ಯ, ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಲ್ಲಾ ಮಹಾವಿದ್ಯಾಲಯ ಹಾಗೂ ಕಾಲೇಜುಗಳನ್ನು ನಶೆಮುಕ್ತ ಮಾಡುವ ಸಂಕಲ್ಪದೊಂದಿಗೆ ಈ ಅಭಿಯಾನ ಪ್ರಾರಂಭ ಮಾಡಿದ್ದೇವೆ. ಇದರ ಜೊತೆಗೆ ಅಂಗಾಂಗ ದಾನ, ಪರಿಸರ ರಕ್ಷಣೆ, ಮಾನಸಿಕ ಹಾಗೂ ದೈಹಿಕ ಒತ್ತಡ ನಿವಾರಣೆಗಾಗಿ ಆರೋಗ್ಯ ಕ್ಷೇಮ ತರಬೇತಿ ಕೇಂದ್ರ ಪ್ರಾರಂಭ, ಒತ್ತಡ ನಿವಾರಣೆಗಾಗಿ ದಿನನಿತ್ಯ ಯೋಗ ಅಭ್ಯಾಸದ ಅಭಿಯಾನವನ್ನು ಸಹ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಹೆಣ್ಣುಮಕ್ಕಳಿಗೆ ಉಚಿತವಾಗಿ ಸ್ತನ ಕ್ಯಾನ್ಸಲ್ ಪರೀಕ್ಷೆ ಹಾಗೂ 7 ಮತ್ತು 8 ತರಗತಿ ವಿದ್ಯಾರ್ಥಿಗಳಿಗೆ ಹೆಚ್.ಪಿ.ವಿ ಲಸಿಕೆ ನೀಡುವ ಚಿಂತನೆ ಇದೆ ಎಂದರು.
ಕಾರ್ಯಕ್ರಮದಲ್ಲಿ ನಸಿರ್ಂಗ್ ವಿದ್ಯಾರ್ಥಿಗಳು ನಶಾ ಮುಕ್ತ ಹಾಗೂ ಅಂಗಾಂಗ ದಾನದ ಕುರಿತು ಜಾಗೃತಿಯ ನಾಟಕ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಬೀದರ ನಗರಸಭೆ ಅಧ್ಯಕ್ಷ ಮಹಮ್ಮದ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಬ್ರಿಮ್ಸ್ ನಿರ್ದೇಶಕ ಶಿವಕುಮಾರ್ ಶೇಟಕಾರ್, ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ರಫೀಕ್, ವೊಬುಲ್ ರೆಡ್ಡಿ, ಸೇನೆಟ್ ಸದಸ್ಯರಾದ ಶ್ರೀನಿವಾಸ್ ವೇಲುರ್, ಮಹೆಂದ್ರ ರೆಡ್ಡಿ, ಸರ್ಕಾರಿ ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲ ರಾಜಕುಮಾರ ಮಾಳಗೆ, ವಾಸಿಮ್ ಸೇರಿದಂತೆ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದೊಂದಿಗೆ ಸಂಯೋಜನೆಗೊಂಡಿರುವ ಬೀದರ ಜಿಲ್ಲೆಯ ಎಲ್ಲಾ ಮಹಾವಿದ್ಯಾಲಯಗಳ ಅಧ್ಯಕ್ಷರು, ಪ್ರಾಂಶುಪಾಲರು ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

























