
ಜಮಖಂಡಿ : ಮೇ 14:ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆ ರದ್ದು ವಿಚಾರ ಖಂಡಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‍ಎಸ್‍ಯುಐ) ವತಿಯಿಂದ ಜಮಖಂಡಿ ನಗರದ ದೇಸಾಯಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವಕರು ಹಾಗೂ ಎನ್‍ಎಸ್‍ಯುಐ ಕಾರ್ಯಕರ್ತರು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಗ್ರೇಡ್-2 ತಹಶೀಲ್ದಾರ್ ಬಸವರಾಜ ಸಿಂಧೂರ ಅವರ ಮೂಲಕ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎನ್‍ಎಸ್‍ಯುಐ ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ವಿಜಯ ತಿಪರಡ್ಡಿ, “ನೀಟ್ ಹಗರಣದ ವಿರುದ್ಧ ನಾವು ಪ್ರತಿಭಟನೆ ನಡೆಸಿದ್ದೇವೆ. ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುವ ರೀತಿಯಲ್ಲಿ ಪರೀಕ್ಷಾ ವ್ಯವಸ್ಥೆ ನಡೆಯುತ್ತಿದೆ. 2024ರಲ್ಲಿ ಸಮಿತಿ ರಚನೆ ಮಾಡಿದರೂ ಅದರ ವರದಿಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿಲ್ಲ. ಇದೇ ನಿರ್ಲಕ್ಷ್ಯದಿಂದ ಈ ಬಾರಿ ನಡೆದ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಬಡ ವಿದ್ಯಾರ್ಥಿಗಳ ಪೆÇೀಷಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ವರ್ಷಗಟ್ಟಲೆ ಓದಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಇದು ದೊಡ್ಡ ಅನ್ಯಾಯವಾಗಿದೆ. ಕೇಂದ್ರ ಸರ್ಕಾರಕ್ಕೆ ನಾಚಿಕೆ ಇದ್ದರೆ ಪ್ರಧಾನಿ ಹಾಗೂ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು,” ಎಂದು ಆಗ್ರಹಿಸಿದರು.
ಆನಂದ ಕಾಂಬಳೆ ಮಾತನಾಡಿ, “ದೇಶಾದ್ಯಂತ ನೀಟ್ ಪರೀಕ್ಷೆ ನಡೆಸುವ ಸಂಸ್ಥೆಯ ಕಾರ್ಯವೈಖರಿ ಸಂಪೂರ್ಣ ವಿಫಲವಾಗಿದೆ. 2024ರಲ್ಲಿಯೇ ನಡೆದ ಹಗರಣದ ಬಳಿಕ ರಚಿಸಲಾದ ಸಮಿತಿಯ ವರದಿ ಇನ್ನೂ ಜಾರಿಗೆ ಬಂದಿಲ್ಲ. ಇಸ್ರೋ ತಜ್ಞರ ಸಮಿತಿ ನೀಡಿದ ಶಿಫಾರಸುಗಳನ್ನು ಕೇಂದ್ರ ಶಿಕ್ಷಣ ಸಚಿವಾಲಯ ಕಡೆಗಣಿಸಿದೆ. ಸರ್ಕಾರದ ನಿರ್ಲಕ್ಷ್ಯವೇ ಇಂತಹ ಹಗರಣಗಳಿಗೆ ಕಾರಣ,” ಎಂದು ಆರೋಪಿಸಿದರು.
ರಮೇಶ ಅಮಾತೆ ಮಾತನಾಡಿ, “ಪ್ರಶ್ನೆಪತ್ರಿಕೆ ಸೋರಿಕೆಯಿಂದ ಅನೇಕ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. 2024ರಲ್ಲಿ ನಡೆದ ಹಗರಣದ ಬಳಿಕ ನೇಮಕವಾದ ಸಮಿತಿಯ ವರದಿಯನ್ನು ಜಾರಿಗೆ ತರದ ಕಾರಣ ಇಂತಹ ಘಟನೆಗಳು ಮರುಕಳಿಸುತ್ತಿವೆ. ಮುಂದೆ ಈ ರೀತಿಯ ಅನ್ಯಾಯ ಆಗದಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿಕಾಸ್ ಬೆಳಗಲಿ, ಸಿದ್ದು ದನಗರ, ಅರ್ಪಿತಾ ಪಾಟೀಲ, ವರದಾ ಕುಲಕರ್ಣಿ, ವಿನೋದ ನಾವಿ, ಸಂದೇಶ ಹೊಸಕೋಟೆ, ಪೂಜಾ ಹವಾಲ್ದಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.


























