
ಕಲಬುರಗಿ:ಮಾ.27: ವಿದ್ಯಾರ್ಥಿ ದಿಸೆಯಿಂದಲೇ ಜ್ಞಾನದ ಜೊತೆಗೆ ಬುದ್ದಿವಂತಿಕೆ, ಸಂಸ್ಕಾರ, ದೇಶಪ್ರೇಮ, ಮಾನವೀಯ ಮೌಲ್ಯಗಳು, ಪರಿಸರ ಪ್ರಜ್ಞೆ ಪ್ರಯತ್ನಶೀಲತೆ, ಶಿಸ್ತು, ಸೃಜನಶೀಲತೆ ಸೇರಿದಂತೆ ಮುಂತಾದ ಮೌಲ್ಯಗಳನ್ನು ಬಿತ್ತುವ ಮೂಲಕ ಬದುಕನ್ನು ಕಟ್ಟಿಕೊಡುವ ಎನ್.ಎಸ್.ಎಸ್ ತನ್ಮೂಲಕ ಸದೃಢ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಜೇವರ್ಗಿ ಸರ್ಕಾರಿ ಪಿಯು ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ್ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್ ಎದುರುಗಡೆಯಿರುವ ‘ಶಾರದಾ ವಿವೇಕ ಮಹಿಳಾ ಡಿಗ್ರಿ ಕಾಲೇಜ್’ನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಬುಧವಾರ ಜರುಗಿದ ‘ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಎನ್.ಎಸ್.ಎಸ್ ಪಾತ್ರ’ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯೆ ಡಾ.ಭಾಗಿರತಿ ಎಚ್.ಗುಡ್ಡೇವಾಡಿ, ಎನ್.ಎಸ್.ಎಸ್ ಅಧಿಕಾರಿ ಪ್ರೊ.ಹಣಮಂತರಾಯ ಗುಡ್ಡೇವಾಡಿ ಮಾತನಾಡಿ, ವಿದ್ಯಾರ್ಥಿಗಳು ಸಾಮಾನ್ಯ ತಿಳುವಳಿಕೆ, ಪ್ರಜ್ಞಾಪೂರ್ವಕ ವರ್ತನೆ, ನಿರಂತರ ಪ್ರಯತ್ನ, ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳುವುದು ಅಗತ್ಯ. ಸಮಾಜ ಸುಧಾರಣೆಯಲ್ಲಿ ಯುವಕರ ಪಾತ್ರ ಅನನ್ಯವಾಗಿದೆ. ಎನ್.ಎಸ್.ಎಸ್‍ನಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಕಾಲೇಜಿನ ಉಪನ್ಯಾಸಕಿಯರಾದ ವನಜಾಕ್ಷಿ ಪಾಟೀಲ್, ರೂಪಾ ಕುಂಬಾರ, ವಿಜಯಲಕ್ಷ್ಮೀ, ಭುವನೇಶ್ವರಿ ಎಸ್.ಬಿ., ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.




















