ನ. ೨೬ಕ್ಕೆ ಮಹಾನ್ ಸರ್ವದಾರ್ಶನಿಕರ ಜಯಂತ್ಯೋತ್ಸವ

ಚಿಕ್ಕನಾಯಕನಹಳ್ಳಿ, ನ. ೨೨- ನಮ್ಮ ನಾಡು ಕಂಡಂತಹ ಎಲ್ಲ ಮಹಾ ದಾರ್ಶನಿಕರ ಜಯಂತಿಗಳನ್ನು ಒಂದೇ ದಿನ ಒಂದೇ ವೇದಿಕೆಯಲ್ಲಿ ಆಚರಿಸುತ್ತಿರುವುದು ಇತಿಹಾಸದಲ್ಲೇ ಮೊದಲು. ಈ ಕಾರ್ಯಕ್ರಮವನ್ನು ಇಡೀ ದೇಶವೇ ತಿರುಗಿ ನೋಡುವಂತೆ ನಡೆಯಲಿದೆ ಎಂದು ಶಾಸಕ ಸಿ.ಬಿ. ಸುರೇಶ್‌ಬಾಬು ಹೇಳಿದರು.
ಪಟ್ಟಣದ ತೀನಂಶ್ರೀ ಭವನದಲ್ಲಿ ನ. ೨೬ ರಂದು ನಡೆಯಲಿರುವ ಸರ್ವದಾರ್ಶನಿಕರ ಜಯಂತ್ಯೋತ್ಸವದ ಅಂಗವಾಗಿ ೫೨ ದಾರ್ಶನಿಕರ ಭಾವಚಿತ್ರಗಳನ್ನು ಆಯಾ ಸಮುದಾಯದ ಮುಖಂಡರುಗಳಿಗೆ ವಿತರಿಸಿ ಅವರು ಮಾತನಾಡಿದರು.


ಧರ್ಮಾತೀತವಾಗಿ, ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಎಲ್ಲರೂ ಒಂದೇ ಭಾವನೆ ಎಂದು ನಮ್ಮ ದಾರ್ಶನಿಕರ ಜಯಂತಿಗಳನ್ನು ಒಂದೇ ದಿನ ಒಂದೇ ವೇದಿಕೆಯಲ್ಲಿ ಎಲ್ಲ ಸಮುದಾಯಗಳ ಸ್ವಾಮೀಜಿಗಳು, ಮುಖಂಡರುಗಳನ್ನು ಒಳಗೊಂಡಂತೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ನವೆಂಬರ್ ೨೬ ರಂದು ವಿಶೇಷ ಸಂವಿಧಾನ ಸಮರ್ಪಣಾ ದಿನಾವಾಗಿದ್ದು, ಅಂದು ತಾಲ್ಲೂಕು ಆಡಳಿತಸೌಧದ ಮುಂಭಾಗ ಅಂಬೇಡ್ಕರ್ ಹಾಗೂ ಕಂಚಿನ ಪುತ್ಥಳಿಗಳನ್ನು ಅನಾವರಣ ನಡೆಯಲಿದೆ. ಇದರೊಂದಿಗೆ ಎಲ್ಲ ದಾರ್ಶನಿಕರ ಭಾವಚಿತ್ರ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ ಎಂದರು.


ಇದಕ್ಕೆ ಸಿದ್ದತೆಯಾಗಿ ಎಲ್ಲ ೫೨ ದಾರ್ಶನಿಕರ ೧೦x೪ ಆಳತೆಯ ಭಾವಚಿತ್ರಗಳನ್ನು ಆಯಾ ಸಮಾಜದವರಿಗೆ ನೀಡುತ್ತಿದ್ದು, ಇನ್ನು ಮುಂದಿನ ದಿನಗಳಲ್ಲಿ ಅವುಗಳನ್ನು ಅವರು ಬಳಸಿಕೊಳ್ಳಬಹುದಾಗಿದೆ. ಇದರೊಂದಿಗೆ ಅಲೆಮಾರಿ ಬುಡಕಟ್ಟಿನವರನ್ನೊಳಗೊಂಡಂತೆ ಇನ್ನು ಯಾವುದೇ ಜಯಂತಿಗಳಿಲ್ಲದೇ ಇರುವಂತಹ ಸಮುದಾಯದವರನ್ನು ಸೇರಿಸಿಕೊಂಡು ಆಚರಣೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಯಾವುದೇ ಮಹನೀಯರು ಮೇಲು ಕೀಳು ಎಂಬ ಭಾವನೆ ಬಾರದಂತೆ ಕ್ಯಾಲೆಂಡರ್‌ನಲ್ಲಿ ವರ್ಷದಲ್ಲಿ ಮೊದಲಿನಿಂದ ಬರುವ ರೀತಿಯಲ್ಲಿ ಆಯೋಜಿಸಲಾಗಿದ್ದು ಮೆರವಣಿಗೆಯಲ್ಲೂ ಅದೇ ರೀತಿ ನಿಲ್ಲಿಸಲಾಗುವುದು ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಬೇಡ ಎಲ್ಲರೂ ಸಹಕಾರ ನೀಡಿ ನಮ್ಮ ತಾಲ್ಲೂಕಿನ ಹಬ್ಬದ ರೀತಿಯಲ್ಲಿ ಆಚರಣೆ ಮಾಡೋಣ ಎಂದರು.


ತಹಶೀಲ್ದಾರ್ ಪುರಂದರ ಕೆ. ಮಾತನಾಡಿ, ಈ ಜಯಂತೋತ್ಸವ ಆಚರಣೆಯನ್ನು ಎಲ್ಲರೂ ಒಪ್ಪಿಕೊಂಡು ಈ ಕಾರ್ಯಕ್ರಮ ಉತ್ತಮವಾಗಿದೆ. ಈ ರೀತಿಯಲ್ಲಿ ಎಲ್ಲ ಮಹನೀಯರ ಜಯಂತಿಯನ್ನು ಒಂದೇ ದಿನ ಆಚರಿಸುವುದರಿಂದ ಎಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ. ಇದು ರಾಜ್ಯ ಮಟ್ಟದಲ್ಲಿ ಗಮನ ಸೇಳೆಯುತ್ತಿದ್ದು ಎಲ್ಲ ಸಮುದಾಯದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಮ್ಮ ಸಂಸ್ಕೃತಿಯನ್ನು ಸಾರುವಂತಹ ಕಲಾ ತಂಡಗಳೊಂದಿಗೆ ಆಕರ್ಷಣಿಯವಾಗಿ ಕಾಣುವಂತೆ ನವೆಂಬರ್ ೨೬ರಂದು ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ತಿಳಿಸಿದರು.


ಈ ಸಂದರ್ಭದಲ್ಲಿ ಇಒ ದೊಡ್ಡಸಿದ್ದಯ್ಯ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹೆಚ್.ಆರ್.ಶಶಿಧರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್‌ಕುಮಾರ್, ಕಾಂಗ್ರೆಸ್ ಮುಖಂಡ ರಘುನಾಥ್, ಡಿಎಸ್‌ಎಸ್ ಸಂಚಾಲಕ ಲಿಂಗದೇವರು ಸೇರಿದಂತೆ ಇತರೆ ಎಲ್ಲಾ ಸಮುದಾಯಗಳ ಅಧ್ಯಕ್ಷರುಗಳು, ಮುಖಂಡರುಗಳು ಉಪಸ್ಥಿತರಿದ್ದರು.