ನ.೧೮ರಿಂದ೨೦.ತಂತ್ರಜ್ಞಾನ ಶೃಂಗ ಸಭೆ

ಬೆಂಗಳೂರು, ಆ. ೧೧- ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಇದೇ ನವೆಂಬರ್ ೧೮ ರಿಂದ ೨೦ ರ ವರೆಗೆ ನಡೆಯಲಿದೆ.
ಕರ್ನಾಟಕ ರಾಜ್ಯ ಸರ್ಕಾರ ಆಯೋಜಿಸಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ೨೮ನೇ ಆವೃತ್ತಿಯ ಬಗ್ಗೆ ಸುದ್ದಿಗೋಷ್ಠಿಯಲ್ಲಿಂದು ವಿವರ ನೀಡಿದ ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆ ಅವರು, ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಪ್ರದರ್ಶನವಾದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ೨೮ನೇ ಆವೃತ್ತಿ ಬರುವ ನವೆಂಬರ್ ೧೮ ರಿಂದ ೨೦ರ ವರೆಗೂ ನಡೆಯಲಿದೆ ಎಂದರು.


ಈ ಬೆಂಗಳೂರು ಟೆಕ್ ಶೃಂಗಸಭೆ-೨೦೨೫ರ ಮೂಲಕ ಬೆಂಗಳೂರು ನಗರ ಮತ್ತೊಮ್ಮೆ ಜಾಗತಿಕ ತಂತ್ರಜ್ಞಾನ, ನಾವೀನ್ಯತೆ ಮತ್ತು ಸಹಭಾಗಿತ್ವದ ಮುಂಚೂಣಿ ಸ್ಥಾನದಲ್ಲಿ ನಿಲ್ಲಲಿದೆ ಎಂದು ಹೇಳಿದರು.


ಬೆಂಗಳೂರಿನ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಈ ಶೃಂಗಸಭೆ ನಡೆಯಲಿದ್ದು, ಶೃಂಗಸಭೆಯಲ್ಲಿ ೨೦ ಸಾವಿರಕ್ಕೂ ಹೆಚ್ಚು ಸಾರ್ಟಪ್‌ಗಳ ಸಂಸ್ಥಾಪಕರುಗಳು, ಸಾವಿರಕ್ಕೂ ಹೆಚ್ಚು ಹೂಡಿಕೆದಾರರು, ೧೫ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದು, ತಂತ್ರಜ್ಞಾನ ಕ್ಷೇತ್ರದ ೬೦೦ಕ್ಕೂ ಹೆಚ್ಚು ಪರಿಣಿತರು ಭಾಷಣ, ಉಪನ್ಯಾಸ ನೀಡುವರು ಎಂದು ಹೇಳಿದರು.


ಈ ಬೆಂಗಳೂರು ತಂತ್ರಜ್ಞಾನ ಸಭೆಯಲ್ಲಿ ೧೨೦೦ಕ್ಕೂ ಹೆಚ್ಚು ಪ್ರದರ್ಶಕರು ಭಾಗಿಯಾಗಲಿದ್ದು, ೧ ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.
ಈ ತಂತ್ರಜ್ಞಾನ ಶೃಂಗಸಭೆಯಲ್ಲಿ ೧೦೦ಕ್ಕೂ ಹೆಚ್ಚು ಜ್ಞಾನಾಧಾರಿತ ಉಪನ್ಯಾಸಗಳು, ೫ ಸಾವಿರಕ್ಕೂ ಹೆಚ್ಚು ಕ್ಯೂರೇಟೆಡ್ ಸಭೆಗಳು ನಡೆಯಲಿದ್ದು, ೬೦ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿಯಾಗುವರು ಎಂದರು.


ಭಾರತದ ಎಲ್ಲ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದು, ಈ ಬಾರಿಯ ಬಿಟಿಎಸ್-೨೦೨೫ ರ ವಿಷಯ ಫ್ಯೂಚರೈಸ್ ಆಗಿದೆ. ಇದು ಮುಂದಿನ ದಶಕಗಳನ್ನು ರೂಪಿಸುವ ತಂತ್ರಜ್ಞಾನ ಪರಿಸರ ವ್ಯವಸ್ಥೆಯ ವೈವಿಧ್ಯಮಯ ವಲಯಗಳಲ್ಲಿ ರೂಪಾಂತರಕ್ಕೆ ಚಾಲನೆ ನೀಡುವ ತಂತ್ರಜ್ಞಾನಗಳನ್ನು ಕಲ್ಪಿಸಲು, ನಾವಿನ್ಯತೆಯನ್ನು ಒದಗಿಸಲು ಮತ್ತು ಅವುಗಳನ್ನು ಕಾರ್ಯಗತಗೊಳಿಸುವ ಕ್ರಿಯೆಗೆ ಒಂದು ಪ್ರಬಲವಾದ ಆಹ್ವಾನವನ್ನು ನೀಡುತ್ತದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.


ಈ ಬಾರಿಯ ಪ್ರದರ್ಶನವು ಎಂದಿಗಿಂತಲೂ ದೊಡ್ಡಮಟ್ಟದಲ್ಲಿ ಇರಲಿದ್ದು, ಹಲವಾರು ಪೆವಿಲಿಯನ್‌ಗಳಲ್ಲಿ ನಾವೀನ್ಯತೆ, ಸಹಭಾಗಿತ್ವ, ವಾಣಿಜ್ಯ ವಲಯಗಳಲ್ಲಿನ ಆವಿಷ್ಕಾರಗಳ ಪ್ರದರ್ಶನವಾಗಲಿದೆ ಎಂದರು.


ಈ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಅಂಗವಾಗಿ ಇಂದು ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ೨೦೦ಕ್ಕೂ ಹೆಚ್ಚು ಉನ್ನತ ಮಟ್ಟದ ಸಂಸ್ಥೆಗಳ ಸಿಇಓಗಳೊಂದಿಗೆ ಉಪಹಾರ ಸಭೆಯನ್ನು ನಡೆಸಿ, ಬೆಂಗಳೂರು ಟೆಕ್ ಶೃಂಗಸಭೆ-೨೦೨೫ನ್ನು ಔಪಚಾರಿಕವಾಗಿ ಘೋಷಣೆ ಮಾಡಲು ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕ ತನ್ನ ನಾಯಕತ್ವ ಸ್ಥಾನವನ್ನು ಮುಂದುವರೆಸಲು ತೆಗೆದುಕೊಳ್ಳಬೇಕಾದ ಅಗತ್ಯ ಪ್ರಮುಖ ಕಾರ್ಯತಂತ್ರಗಳು ಮತ್ತು ಉಪಕ್ರಮಗಳ ಕುರಿತು ಚರ್ಚೆ ನಡೆಸಿದರು.