ಕುಖ್ಯಾತ ಕನ್ನಗಳ್ಳನ ಬಂಧನ ೪೨ ಲಕ್ಷ ಮೌಲ್ಯದ ಚಿನ್ನ ಜಪ್ತಿ

ಬೆಂಗಳೂರು,ಜ.೨೦- ಸಂಬಂಧಿಯ ಜೊತೆ ಸೇರಿ ಕನ್ನ ಕಳವು ಮಾಡುತ್ತಿದ್ದ ಕುಖ್ಯಾತ ಕನ್ನಗಳ್ಳನನ್ನು ಬಂಧಿಸಿರುವ ಮಾದನಾಯಕನಹಳ್ಳಿ ಪೊಲೀಸರು ೪೨ ಲಕ್ಷ ಮೌಲ್ಯದ ೩೪೮ ಗ್ರಾಂ ಚಿನ್ನ,ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ.


ಮಂಡ್ಯ ಜಿಲ್ಲೆಯ ಪಾಂಡವಪುರದ ಶ್ರೀಕಾಂತ ಅಲಿಯಾಸ್ ಕಾಂತ(೪೨) ಬಂಧಿತ ಕಳ್ಳನಾಗಿದ್ದು,ಈತನ ಜೊತೆ ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಹಲಗೂರಿನ ಸಿದ್ದ ಅಲಿಯಾಸ್ ನಾಗರಾಜನ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಯ ವಿರುದ್ಧ ಹಿಂದೆ ತಲಘಟ್ಟಪುರ, ಸುಬ್ರಮಣ್ಯಪುರ, ಪುಟ್ಟೇನಹಳ್ಳಿ, ಹೆಬ್ಬಗೋಡಿ, ಸೂರ್ಯನಗರ ಪೊಲೀಸ್ ಠಾಣೆಗಳಲ್ಲಿ ಮನೆ ಕಳವು ಪ್ರಕರಣಗಳು ದಾಖಲಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಹೇಳಿದರು.


ಮಾದನಾಯಕನಹಳ್ಳಿಯ ಅಂಚೆಪಾಳ್ಯದ ಲೀನಾ ಅವರು ಕಳೆದ ಅ.೭ ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ತಮಿಳುನಾಡಿಗೆ ಹೋಗಿ ಎರಡು ದಿನಗಳ ಬಳಿಕ ಪಕ್ಕದ ಮನೆಯವರು ಪೋನ್ ಮಾಡಿ, ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ತಿಳಿಸಿದ ಕೂಡಲೇ ವಾಪಸ್ಸು ಮನೆಗೆ ಬಂದು ನೋಡಿದಾಗ ಗೇಟ್ ಮತ್ತು ಮನೆಯ ಮುಂಬಾಗಿಲ ಬೀಗವನ್ನು ಮುರಿದು, ಮನೆಯ ಮೊದಲ ಮಹಡಿಯ ಕೊಠಡಿಯ ವಾರ್ಡ್ ರೋಬಿನಲ್ಲಿದ್ದ ೨೪೮ ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಲಾಗಿತ್ತು.
ಈ ಸಂಬಂಧ ನೀಡಿದ ದೂರು ಆಧರಿಸಿ ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಕೈಗೊಂಡು ಕಳೆದ ಜ.೧೧ ರಂದು ಪಾಂಡವಪುರದ ಬಳಿ ಆರೋಪಿಯನ್ನು ಬಂಧಿಸಲಾಗಿದೆ.


ಸಂಬಂಧಿಕ ತಲೆಮರೆಸಿಕೊಂಡಿರುವ ಸಿದ್ದನ ಜೊತೆ ಸೇರಿ ಕಳವು ಮಾಡಿ ಮಾದನಾಯಕನ ಹಳ್ಳಿಯ ಮತ್ತೊಂದು ಮನೆಯಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.


ಕಳವು ಮಾಡಿದ ಚಿನ್ನಾಭರಣಗಳನ್ನು ಪಾಂಡವಪುರದ ೨ ಜ್ಯೂವೆಲರಿ ಅಂಗಡಿಗಳು ಮತ್ತು ಮೈಸೂರಿನ ೧ ಜ್ಯೂವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿರುವುದನ್ನು ಬಾಯ್ಬಿಟ್ಟಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.


ವಾಯುವ್ಯ ವಿಭಾಗದ ಡಿಸಿಪಿ ಡಿ.ಎಲ್.ನಾಗೇಶ್ ಮಾರ್ಗದರ್ಶನದಲ್ಲಿ ಮಾದನಾಯಕನಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಮುರಳಿಧರ.ಎಂ.ಕೆ ಮತ್ತವರ ಸಿಬ್ಬಂದಿ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.