
ಬೀದರ್, ಫೆ ೨೨: ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರಿಗೆ ಪೊಲೀಸ್ ಇಲಾಖೆ ನೋಟಿಸ್ ಜಾರಿ ಮಾಡಿದ ವಿಚಾರಕ್ಕೆ ಸಂಬAಧಿಸಿ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಜಿಲ್ಲಾ ಪೊಲೀಸ್ ಇಲಾಖೆ ಕಾಂಗ್ರೆಸ್ ಕೈಗೊಂಬೆಯAತೆ ಕೆಲಸ ಮಾಡುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಒತ್ತಡಕ್ಕೆ ಒಳಗಾಗಿ ಅಧಿಕಾರ ದುರ್ಬಳಕೆ ಮಾಡುತ್ತಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ್ ಸೇರಿದಂತೆ ಹಲವು ಶಾಸಕರು ಹಾಗೂ ಮುಖಂಡರು ಸಂಯುಕ್ತ ಪತ್ರಿಕಾ ಪ್ರಕಟಣೆ ನೀಡಿದ್ದು, ಕಾನೂನು-ಸುವ್ಯವಸ್ಥೆ ಹಾಗೂ ಜಿಲ್ಲೆಯ ಪ್ರಮುಖ ಸಮಸ್ಯೆಗಳ ಕಡೆ ಗಮನ ಹರಿಸದೆ ಪ್ರತಿಪಕ್ಷದ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ.
ಪಾಪನಾಶ ದೇವಸ್ಥಾನ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಡ್ಡಿಪಡಿಸಿ ಬಂಧಿಸುವ ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ. ಸಚಿವರ ಒತ್ತಡದಿಂದ ಧಾರ್ಮಿಕ ಕಾರ್ಯಕ್ರಮಕ್ಕೂ ಅವಕಾಶ ನೀಡಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಭಗವಂತ ಖೂಬಾ ಅವರಿಗೆ ಮೊದಲು ಫೆಬ್ರವರಿ ೨೫ ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದ್ದರೆ, ನಂತರ ಅದೇ ದಿನಾಂಕವನ್ನು ಬದಲಿಸಿ ಫೆಬ್ರವರಿ ೨೧ಕ್ಕೆ ಹಾಜರಾಗುವಂತೆ ಮತ್ತೊಂದು ನೋಟಿಸ್ ನೀಡಲಾಗಿದೆ. ಒಂದೇ ಪ್ರಕರಣದಲ್ಲಿ ಕಡಿಮೆ ಅವಧಿಯಲ್ಲಿ ಎರಡು ನೋಟಿಸ್ ಜಾರಿ ಮಾಡಿರುವುದು ಪೊಲೀಸ್ ಇಲಾಖೆಯ ಕ್ರಮ ಪ್ರಶ್ನಾರ್ಥಕವಾಗಿದೆ ಎಂದು ಬಿಜೆಪಿ ಹೇಳಿದೆ. ?
ಪೊಲೀಸ್ ಇಲಾಖೆ ಪಾರದರ್ಶಕವಾಗಿ ಕಾರ್ಯನಿರ್ವಹಿಸದೆ ರಾಜಕೀಯ ಪ್ರೇರಿತವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಈ ವಿಷಯವನ್ನು ರಾಜ್ಯ ಮಟ್ಟದ ನಾಯಕರ ಗಮನಕ್ಕೆ ತಂದಿರುವುದಾಗಿ ತಿಳಿಸಿದೆ. ಅಗತ್ಯವಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಜಿಲ್ಲೆಯಲ್ಲಿ ಎಟಿಎಂ ದರೋಡೆ, ಶೂಟೌಟ್ ಪ್ರಕರಣ ಸೇರಿದಂತೆ ಹಲವು ಅಪರಾಧ ಪ್ರಕರಣಗಳ ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂಬುದನ್ನು ಉಲ್ಲೇಖಿಸಿದ ಬಿಜೆಪಿ, ಪೊಲೀಸ್ ಇಲಾಖೆ ಇವುಗಳತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದೆ. ಅಧಿಕಾರಿಗಳು ನಿಯಮಾನುಸಾರ ಕಾರ್ಯನಿರ್ವಹಿಸಬೇಕು, ಯಾರ ಒತ್ತಡಕ್ಕೂ ಒಳಗಾಗಬಾರದು ಎಂದು ಬಿಜೆಪಿ ಪ್ರಕಟಣೆಯಲ್ಲಿ ಹೇಳಿದೆ.



























