Home ಜಿಲ್ಲೆ ಬೆಂಗಳೂರು ಅರಾಭಿಕೊತ್ತನೂರು ಮಕ್ಕಳಿಗೆ ೮ ವರ್ಷಗಳಿಂದ ನೋಟ್‌ಪುಸ್ತಕ ವಿತರಣೆ

ಅರಾಭಿಕೊತ್ತನೂರು ಮಕ್ಕಳಿಗೆ ೮ ವರ್ಷಗಳಿಂದ ನೋಟ್‌ಪುಸ್ತಕ ವಿತರಣೆ

ಕೋಲಾರ,ಜೂ,೪- ವಿದ್ಯಾರ್ಥಿಗಳು ಧನಾತ್ಮಕ ಭಾವನೆ ರೂಢಿಸಿಕೊಳ್ಳಿ, ಮೊಬೈಲ್ ದಾಸರಾಗದೇ ಪರಿಶ್ರಮದಿಂದ ಓದಿದರೆ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ನಗರ ಹೊರವಲಯದ ಶಾಹಿ ಎಕ್ಸ್‌ಪೋರ್ಟ್ಸ್‌ನ ನಿವೃತ್ತ ಜನರಲ್ ಮ್ಯಾನೇಜರ್ ಹಾಗೂ ದಾನಿ ಎಲ್.ರಘುರಾಜ್ ಕಿವಿಮಾತು ಹೇಳಿದರು.


ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ತಮ್ಮ ನಿಸ್ವಾರ್ಥ ಸೇವೆಯ ಭಾಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ಮಕ್ಕಳ ಕಲಿಕೆಗೆ ಕೊರತೆಯಾಗದ ರೀತಿ ನೋಟ್‌ಪುಸ್ತಕಗಳು, ಗಣಿತ ಕಲಿಕೆಗೆ ಅನುಕೂಲವಾಗಲು ಜಾಮಿಟ್ರಿ ಬಾಕ್ಸ್, ಗ್ರಾಫ್‌ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡುತ್ತಿದ್ದರು.


ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಬೇಕು, ಇಂತಹ ಸುಂದರ ಪರಿಸರ ನಿಮಗೆ ಯಾವ ಖಾಸಗಿ ಶಾಲೆಯಲ್ಲೂ ಸಿಗದು ಎಂದ ಅವರು, ಕಾನ್ವೆಂಟ್ ವ್ಯಾಮೋಹದಿಂದ ಪೋಷಕರು ಹೊರಬರಬೇಕು ಎಂದರು.


ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕಲಿಸುವ ಅಗತ್ಯವಿದೆ, ಓದಿನ ಜತೆ ಶಿಸ್ತುಬದ್ದ ಜೀವನದ ಪಾಠ ಮಕ್ಕಳಿಗೆ ನೀಡುತ್ತಿರುವ ಈ ಶಾಲೆ ಆವರಣದಲ್ಲಿ ಧನಾತ್ಮಕ ಶಕ್ತಿಯ ಸಂಚಲನವಾಗುತ್ತಿದೆ, ಇಲ್ಲಿನ ಪರಿಸರ,ಬೆಟ್ಟದ ತಪ್ಪಲಿನ ಸುಂದರ ಪ್ರಕೃತಿಯ ಮಡಿಲು ಕಲಿಕೆಗೆ ಹೇಳಿ ಮಾಡಿಸಿದಂತಿದೆ, ಈ ವಾತಾವರಣದಲ್ಲಿ ಮಕ್ಕಳು ಕಲಿತರೆ ಸಾಧಕರಾಗುವುದರಲ್ಲಿ ಸಂಶಯವಿಲ್ಲ ಎಂದರು. ಎಸ್ಸೆಸ್ಸೆಲ್ಸಿಯಲ್ಲಿ ಶೇ.೧೦೦ ಫಲಿತಾಂಶದ ಸಾಧನೆ ಮಾಡಿರುವ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ನೋಡಿದರೆ ಗುರುಕುಲದ ನೆನಪು ತರುತ್ತದೆ ಎಂದ ಅವರು, ಮಕ್ಕಳಿಗೆ ಸರ್ಕಾರಿ ಸೌಲಭ್ಯಗಳ ಜತೆಗೆ ಮತ್ತಷ್ಟು ಪರಿಕರಗಳನ್ನು ಕೊಡಿಸುವ ಪ್ರಯತ್ನ ಶಿಕ್ಷಕರಿಂದ ನಡೆದಿರುವುದು ಸ್ವಾಗತಾರ್ಹ ಎಂದರು.


ದೇಶ ಕಂಡ ಸಾಧಕರೆಲ್ಲಾ ಸರ್ಕಾರಿ ಶಾಲೆಯಲ್ಲೇ ಓದಿದವರು ಎಂದ ಅವರು, ಕೀಳಿರಿಮೆ ತೊರೆದು ಮಕ್ಕಳನ್ನು ಇಲ್ಲಿ ದಾಖಲಿಸುವ ಮೂಲಕ ಸಮಾನ ಶಿಕ್ಷಣಕ್ಕೆ ಹಾನಿಯಾಗುವುದನ್ನು ತಪ್ಪಿಸುವ ಹೊಣೆ ಪೋಷಕರು,ಸರ್ಕಾರ ಮತ್ತು ಸಮಾಜದ ಮೇಲಿದೆ ಎಂದು ಅಭಿಪ್ರಾಯಪಟ್ಟರು.


ಶಾಲೆಗೆ ಬರುವ ಮಕ್ಕಳು ಶಿಸ್ತು ರೂಢಿಸಿಕೊಳ್ಳಿ,ಪರಸ್ಪರ ದ್ವೇಷ,ಅಸೂಯೆ ತೊರೆದು ಎಲ್ಲರೂ ಸ್ನೇಹಿತರಂತೆ ಇರಬೇಕು, ಜಾತಿ,ಧರ್ಮದ ಎಲ್ಲೆ ಮೀರಿ ನಾವೆಲ್ಲಾ ಒಂದೇ ಎಂಬ ಪವಿತ್ರ ಭಾವನೆಯೊಂದಿಗೆ ಉತ್ತಮ ಸ್ನೇಹಿತರಾಗಿ ಕಲಿಕೆಯ ಧ್ಯೇಯ,ಗುರಿ ಸಾಧನೆಗೆ ಮುನ್ನಡಿ ಬರೆಯಬೇಕು ಎಂದು ಕಿವಿಮಾತು ಹೇಳಿದರು.


ಈ ಮಕ್ಕಳು, ಇಲ್ಲಿನ ಕಲಿಕೆಗೆ ಪೂರಕವಾದ ಪರಿಸರ, ಸೌಲಭ್ಯಗಳ ಸದ್ಬಳಕೆ ಕಂಡಾಗ ನೀಡುತ್ತಿರುವ ಸಹಾಯ ಸಾರ್ಥಕವೆನಿಸುತ್ತಿದೆ, ಇಂತಹ ಶಾಲೆಗೆ ಇನ್ನಷ್ಟು ನೆರವು ಒದಗಿಸುವ ಮೂಲಕ ನಿಮ್ಮೊಂದಿಗೆ ಸದಾ ಇರುವುದಾಗಿ ತಿಳಿಸಿದರು. ಶಾಲೆಯ ಮುಖ್ಯಶಿಕ್ಷಕಿ ತಾಹೇರಾ ನುಸ್ರತ್ ಮಾತನಾಡಿ, ರಘುರಾಜ್ ಅವರು ನಿವೃತ್ತರಾಗಿ ಬೆಂಗಳೂರು ಸೇರಿದ್ದರೂ, ಈ ಸರ್ಕಾರಿ ಶಾಲೆಯ ಕುರಿತು ಹೊಂದಿರುವ ಪ್ರೀತಿ, ಈ ಮಕ್ಕಳ ಮೇಲಿನ ಮಮತೆ ನಿಜಕ್ಕೂ ಅವರಲ್ಲಿನ ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿದೆ, ಯಾವುದೇ ಸ್ವಾರ್ಥವಿಲ್ಲದೇ ಪ್ರತಿ ವರ್ಷ ಮಕ್ಕಳ ಕಲಿಕೆಗೆ ನೆರವಾಗುತ್ತಿರುವ ಅವರಿಗೆ ಶಾಲೆಯ ಮಕ್ಕಳ ಪರವಾಗಿ ಧನ್ಯವಾದ ಎಂದರು.


ರಘುರಾಜ್ ಅವರ ಹೃದಯವಂತಿಕೆ ಎಲ್ಲಾ ಉಳ್ಳವರಲ್ಲೂ ಕಾಣಲು ಸಾಧ್ಯವಿಲ್ಲ, ಅವರು ತಮ್ಮ ಸಂಪಾದನೆಯಲ್ಲಿ ಒಂದಷ್ಟು ಬಡ ಸರ್ಕಾರಿ ಶಾಲಾ ಮಕ್ಕಳಿಗೆ ನೆರವಾಗಬೇಕು ಎಂಬ ಅವರ ಧ್ಯೇಯ ಮೆಚ್ಚುವಂತದ್ದು, ಅವರೇನು ಇಲ್ಲಿ ಚುನಾವಣೆಗೆ ನಿಲ್ಲಲ್ಲ, ಕೇವಲ ಬಡ ಮಕ್ಕಳಿಗೆ ನೆರವಾಗುವ ಒಂದೇ ಉದ್ದೇಶವಿದೆ ಎಂದರು.