
ವಿಜಯಪುರ, ಮೇ. 28:ರಾಜ್ಯದಲ್ಲಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಇರಿಸುವುದು ಪ್ರತಿಪಕ್ಷದ ಕರ್ತವ್ಯ. ಈ ಕರ್ತವ್ಯದ ಭಾಗವಾಗಿ ಬಿಜೆಪಿ ಚಾರ್ಜ್ ಶೀಟ್ ಪತ್ರಿಕೆಗಳಿಗೆ ಹೇಳಿಕೆ ಬಿಡುಗಡೆ ಮಾಡಿದೆ. ಆದರೆ ಇದರಲ್ಲೂ ದ್ವೇಷ ರಾಜಕಾರಣ ಸಾಧಿಸಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿ ಧೋರಣೆ ಮಾಡುತ್ತಿದೆ. ಆದರೆ ಇದಕ್ಕೆ ನಾವು ಹೆದರಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಗುಡುಗಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾವು ಕಾಂಗ್ರೆಸ್ ಪಕ್ಷದ ದಮನ ನೀತಿಗೆ ಹೆದರುವುದಿಲ್ಲ. ನಮ್ಮ ಕಾರ್ಯಕರ್ತರು ಗಟ್ಟಿಯಾಗಿದ್ದಾರೆ. ಜನರಿಗಾಗಿ ಜೈಲಿಗೆ ಹೋಗಲು ಸಹ ನಾವೆಲ್ಲರೂ ಸಿದ್ಧರಿದ್ದೇವೆ.
ಒಂದು ರೀತಿ ಹಿಟ್ಲರ್ ಮನೋಸ್ಥಿತಿಯಲ್ಲಿ ರಾಜ್ಯ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರ ವೈಫಲ್ಯವಾಗಿರುವುದು ನಿಜ. ಅದನ್ನು ಅಂಕಿ ಅಂಶಗಳನ್ನು ಜನರ ಮುಂದೆ ಮಾಧ್ಯಮ ಮೂಲಕ ಕರ್ತವ್ಯವನ್ನು ನಿಭಾಯಿಸುವುದು ವಿರೋಧ ಪಕ್ಷದ ಜವಾಬ್ದಾರಿ. ಆದರೆ ಇದನ್ನೇ ದ್ವೇಷ ಸಾಧಿಸಿಕೊಂಡು ಎಫ್‍ಐಆರ್ ದಾಖಲಿಸುವ ಮೂಲಕ ವಿರೋಧ ಪಕ್ಷಗಳನ್ನು ದಮನಗೊಳಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣಗೊಳಿಸುವ ಮೂಲಕ ಅಘೋಷಿತ ತುರ್ತು ಪರಿಸ್ಥಿತಿ ಹೇರುವ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಜಿಗಜಿಣಗಿ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ಈ ರೀತಿ ದಮನಕಾರಿ ನೀತಿಯ ವಿರುದ್ಧ ನಾವು ಸಂಘಟಿತ ಹೋರಾಟ ಮಾಡಲು ಹೆದರುವುದಿಲ್ಲ. ಸರ್ಕಾರ ಇನ್ನಾದರೂ ಸರ್ವಾಧಿಕಾರಿ ಧೋರಣೆ ಬದಿಗಿಟ್ಟು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಲು ಮುಂದಾಗಬೇಕು ಹೊರತು ದಮನಕಾರಿ, ದ್ವೇಷರಾಜಕಾರಣವನ್ನು ಬಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.