ವಿಜಯಪುರ, ಸೆ. 14: ಮದ್ದೂರಿನಲ್ಲಿ ಮಾಡಿದ ಭಾಷಣಕ್ಕಾಗಿ ನನ್ನ ಮೇಲೆ ರಾಜ್ಯ ಸರ್ಕಾರ ಎಫ್ ಐ ಆರ್ ದಾಖಲಿಸಿದೆ. ಸರ್ಕಾರ ಅದೆಷ್ಟೇ ಎಫ್ ಐ ಆರ್ ಗಳನ್ನು ಹಾಕಿದರೂ ಸಹ ನಾನು ವಿಚಲಿತನಾಗುವುದಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಗೋ ಮಾತೆಯ ಕೆಚ್ಚಲನ್ನು ಕತ್ತರಿಸಿದಾಗ, ಗಣೇಶ ವಿಸರ್ಜನೆ ನಡೆಯುತ್ತಿರುವಾಗ ಕಲ್ಲು ತೂರಾಟ ನಡೆಸಿದವರ ಮೇಲೆ, ಮಸೀದಿಯಲ್ಲಿ ಕಲ್ಲು ಶೇಖರಣೆ ಮಾಡಿ ಗಣೇಶೋತ್ಸವ ಹೋಗುತ್ತಿರುವಾಗ ಕಲ್ಲು ತೂರಿದವರ ಮೇಲೆ ಮೊದಲು ಕ್ರಮ ಕೈಗೊಳ್ಳಲಿ ಎಂದು ಅವರು ಹೇಳಿದ್ದಾರೆ.
ಹಿಂದೂಗಳ ಉತ್ಸವ, ಆಚರಣೆಗಳನ್ನು ಗುರಿಯಾಗಿಸಿಕೊಂಡು ಶಾಂತಿ ಕದಡುತ್ತಿರುವ ದುಷ್ಟ ಶಕ್ತಿಗಳ ಹೆಡೆ ಮುರಿಕಟ್ಟಲು ಆಗದ ರಾಜ್ಯ ಸರ್ಕಾರ ಹಿಂದೂಗಳ ಹಕ್ಕುಗಳನ್ನು ಪ್ರತಿಪಾದಿಸಿದ ನಮ್ಮಂತವರ ಮೇಲೆ ಕೇಸು ಹಾಕುತ್ತಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಂತ್ಯ ಮದ್ದೂರಿನಿಂದಲೇ ಪ್ರಾರಂಭವಾಗಲಿದೆ. ಇದಕ್ಕೆ ಮೊನ್ನೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಹಿಂದೂಗಳೇ ಸಾಕ್ಷಿ. ಹೆದರಿಸುವ, ಬೆದರಿಸುವ ಪ್ರಯತ್ನಕ್ಕೆ ಜಗ್ಗುವ ಮಾತೆ ಇಲ್ಲ ಎಂದು ತಿಳಿಸಿದ್ದಾರೆ.
























