
ಜಮ್ಮು-ಕಾಶ್ಮೀರ,ಡಿ.೨೧- ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯವು ಭಯೋತ್ಪಾದನೆಯ ವಿರುದ್ಧ ಮಹತ್ವದ ತೀರ್ಪು ನೀಡಿದೆ. ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಮೊಹಮ್ಮದ್ ಯೂಸುಫ್ ಶಾ ಅಲಿಯಾಸ್ ಸೈಯದ್ ಸಲಾಹುದ್ದೀನ್ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಇದರೊಂದಿಗೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಆತನನ್ನು ಬಂಧಿಸಲು ಆದೇಶಿಸಲಾಗಿದೆ. ಈ ನಿರ್ಧಾರವನ್ನು ದೀರ್ಘಕಾಲದಿಂದ ನಡೆಯುತ್ತಿರುವ ಭಯೋತ್ಪಾದನಾ ಪ್ರಕರಣಗಳಲ್ಲಿ ಮಹತ್ವದ ತಿರುವು ಎಂದು ಪರಿಗಣಿಸಲಾಗುತ್ತಿದೆ.
ಸೈಯದ್ ಸಲಾವುದ್ದೀನ್ ಕಳೆದ ಹಲವು ದಶಕಗಳಿಂದ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದು ಭದ್ರತಾ ಸಂಸ್ಥೆಗಳ ಪ್ರಕಾರ, ಅವನು ಅಲ್ಲಿಂದ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದು ಆರೋಪಿ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾನೆ ಮತ್ತು ಭಾರತದ ಸಾರ್ವಭೌಮತ್ವಕ್ಕೆ ಗಂಭೀರ ಬೆದರಿಕೆಯನ್ನು ಒಡ್ಡುತ್ತಿದ್ದಾನೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ಈ ಆಧಾರದ ಮೇಲೆ, ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸುವುದು ಅಗತ್ಯವಾಗಿತ್ತು ಎನ್ನಲಾಗಿದೆ.
ಈ ಜಾಮೀನು ರಹಿತ ವಾರೆಂಟ್ ೨೦೧೨ ರಲ್ಲಿ ದಾಖಲಾಗಿದ್ದ ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿದೆ. ಸಲಾವುದ್ದೀನ್ ವಿರುದ್ಧ ಪಿತೂರಿ, ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡಿದ ಗಂಭೀರ ಆರೋಪಗಳಿವೆ. ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಪುರಾವೆಗಳು ಆರೋಪಿಯು ಭಯೋತ್ಪಾದಕ ಚಟುವಟಿಕೆಗಳಲ್ಲಿ ನೇರ ಭಾಗಿಯಾಗಿರುವುದನ್ನು ಪ್ರಾಥಮಿಕವಾಗಿ ಕಂಡು ಬಂದಿದೆ ಎಂದು ನ್ಯಾಯಾಲಯ ಹೇಳಿದೆ.



























