Home ಮುಖಪುಟ ಸುದ್ದಿ ಸಿದ್ದು ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ

ಸಿದ್ದು ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ

ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ವಿ. ಸೋಮಣ್ಣ, ಪ್ರಹ್ಲಾದ ಜೋಷಿ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ. ಮೋಹನ್ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇದ್ದಾರೆ.

ಬೆಂಗಳೂರು, ಮೇ ೧೦- ರಾಜ್ಯ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆ ಕಿತ್ತಾಟದ ಬಗ್ಗೆ ಪ್ರಸ್ತಾಪಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.


ಪಶ್ಚಿಮಬಂಗಾಳ, ಅಸ್ಲಾಂ, ಪುದುಚೇರಿಯಲ್ಲಿ ಬಿಜೆಪಿಯ ದಿಗ್ವಿಜಯದ ರೂವಾರಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯ ಬಿಜೆಪಿ ಹೆಚ್‌ಎಎಲ್‌ನ ವಿಮಾನ ನಿಲ್ದಾಣದ ಬಳಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಅಭಿನಂದಿಸಿ ಸನ್ಮಾನಿಸಿದ ಸಂದರ್ಭದಲ್ಲಿ ಸಾರ್ವಜನಿಕರ ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಜನರು ಸಮಸ್ಯೆಗಳಿಂದ ಬಳಲುತ್ತಿದ್ದರೆ, ಕಾಂಗ್ರೆಸ್ ನಾಯಕರು ಮಾತ್ರ ಖಜಾನೆ ಲೂಟಿ ಹೊಡೆದ ಹಣಕ್ಕಾಗಿ ಆಂತರಿಕ ಜಗಳ ಮತ್ತು ಕುರ್ಚಿ ಕಿತ್ತಾಟದಲ್ಲಿ ಮುಳುಗಿದ್ದಾರೆ. ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.


ಈ ಹಿಂದೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನಾಯಿತು ಎಂಬುದು ಗೊತ್ತಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಅದೇ ಹಾದಿಯಲ್ಲಿ ಮುಂದುವರೆಯುತ್ತಿದೆ ಎಂದು ಹೇಳಿದರು.


ಕಾಂಗ್ರೆಸ್ ಎಲ್ಲೆಲ್ಲಿ ಅಧಿಕಾರಕ್ಕೆ ಬರುತ್ತದೋ ಅಲ್ಲೆಲ್ಲಾ ಒಂದೊಂದು ಸಮಸ್ಯೆ ಇದ್ದೆ ಇರುತ್ತದೆ.. ಹಿಮಾಚಲ ಪ್ರದೇಶದಲ್ಲಿ ಸಫಾಯಿ ಕರ್ಮಚಾರಿಗಳಿಗೆ ವೇತನ ನೀಡಿಲ್ಲ. ತೆಲಂಗಾಣದಲ್ಲಿ ರೈತರ ಆತ್ಮಹತ್ಯೆಗಳಾಗುತ್ತಿವೆ. ಕೇರಳ ಚುನಾವಣೆಯಲ್ಲಿ ಬಹುಮತಗಳಿಸಿರುವ ಕಾಂಗ್ರೆಸ್‌ಗೆ ಇನ್ನೂ ಮುಖ್ಯಮಂತ್ರಿ ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.


ಕಾಂಗ್ರೆಸ್ ಕಿತ್ತೊಗೆಯಿರಿ
ಕಾಂಗ್ರೆಸ್ ಪಕ್ಷ ವಿಶ್ವಾಸಘಾತಕ ಪಕ್ಷವಾಗಿದೆ. ಕಾಂಗ್ರೆಸ್‌ನ್ನು ಕಿತ್ತೊಗೆಯಬೇಕು. ಇದಕ್ಕಾಗಿ ಎಲ್ಲರೂ ಒಟ್ಟಾಗಬೇಕು ಎಂದು ಮೋದಿ ಕರೆ ನೀಡಿದರು.
ದೇಶವನ್ನು ವಿಕಾಸದತ್ತ ಕೊಂಡೊಯ್ಯಲು ಕಾಂಗ್ರೆಸ್‌ನ್ನು ಅಧಿಕಾರದಿಂದ ದೂರವಿಡುವ ಕೆಲಸ ಆಗಬೇಕಿದೆ. ಬೆನ್ನಿಗೆ ಚೂರಿ ಹಾಕುವ ಬುದ್ಧಿ ಕಾಂಗ್ರೆಸ್‌ಗೆ ರಕ್ತಗತವಾಗಿ ಬಂದಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತದೆ ಎಂದು ಆರೋಪಿಸಿದರು.


ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ೨೦೧೪ ಕ್ಕೂ ಮುನ್ನ ಹತ್ತು ವರ್ಷ ಅಧಿಕಾರದಲ್ಲಿದ್ದದ್ದು ಡಿಎಂಕೆಯ ಬೆಂಬಲದಿಂದ. ಆದರೆ, ಕಾಂಗ್ರೆಸ್ ಪಕ್ಷ ಡಿಎಂಕೆ ಅಧಿಕಾರದಲ್ಲಿ ಇಲ್ಲ ಎಂದು ಅದರ ಬೆನ್ನಿಗೆ ಚೂರಿ ಹಾಕಿದೆ. ಹೊಸ ಪಕ್ಷದ ಬೆನ್ನೇರಿದೆ. ಆ ಪಕ್ಷಕ್ಕೂ ಕಾಂಗ್ರೆಸ್ ಚೂರಿ ಹಾಕುವ ಕಾಲ ದೂರವಿಲ್ಲ ಎಂದು ವಾಗ್ದಾಳಿ ನಡೆಸಿದರು.


ಕಾಂಗ್ರೆಸ್ ಪಕ್ಷ ಕೇವಲ ಅದರ ಮಿತ್ರ ಪಕ್ಷಗಳಿಗೆ ಚೂರಿ ಹಾಕಿಲ್ಲ ದೇಶದ ಮಹಿಳೆಯರಿಗೂ ದ್ರೋಹ ಬಗೆದಿದೆ. ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ ಸೋಲಿಸಿತು. ಇಂತಹ ವಿಶ್ವಾಸ ದ್ರೋಹಿ ಕಾಂಗ್ರೆಸ್‌ನ್ನು ಜನ ಸೋಲಿಸಬೇಕು ಎಂದು ಕರೆ ನೀಡಿದರು.


ಬಿಜೆಪಿಯ ಆಡಳಿತ ಹೇಗಿದೆ ಎಂದರೆ ನಾವು ಒಮ್ಮೆ ಸರ್ಕಾರ ರಚಿಸಿದರೆ ಜನರ ಎರಡು ಮುತ್ತು ಮೂರನೇ ಬಾರಿ ಅಧಿಕಾರ ನೀಡುತ್ತಾರೆ. ಅಸ್ಸಾಂ, ಪುದುಚೇರಿಯೆ ಇದಕ್ಕೆ ಉದಾಹರಣೆ. ಪಶ್ಚಿಮಬಂಗಾಳದಲ್ಲಿ ಹತ್ತು ವರ್ಷಗಳ ಹಿಂದೆ ಬಪಿಜೆಪಿಯ ಮೂವರು ಶಾಸಕರು ಇದ್ದರು. ಈಗ ೨೦೩ ಶಾಸಕರೊಂದಿಗೆ ಸರ್ಕಾರ ರಚಿಸಿದ್ದೇವೆ. ಕೇರಳದಲ್ಲಿ ಈಗ ಮೂವರು ಶಾಸಕರಿದ್ದೇವೆ. ಅಲ್ಲಿಯೂ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುವ ದಿನ ದೂರವಿಲ್ಲ ಎಂದು ಮೋದಿ ಭವಿಷ್ಯ ನುಡಿದರು.


ಕರ್ನಾಟಕದ ಲೋಕಸಭಾ ಸದಸ್ಯರ ಸಂಖ್ಯೆಯಲ್ಲಿ ಬಿಜೆಪಿಯೇ ದೊಡ್ಡ ಪಕ್ಷ ಎಂಬುದನ್ನು ಯಾರೂ ಮರೆಯಬಾರದು ಎಂದು ಪ್ರಧಾನಿ ಮೋದಿ ಹೇಳಿದರು.


ಬೆಂಗಳೂರನ್ನು ಭಾರತದ ಭವಿಷ್ಯದ ಇಂಜಿನ್ ಎಂದು ಕರೆದ ಮೋದಿ, ಇಂದು ಇಡೀ ಜಗತ್ತಿನ ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡುತ್ತಿದ್ದರೆ ಅದಕ್ಕೆ ಬೆಂಗಳೂರಿನ ಯುವಶಕ್ತಿಯೇ ಕಾರಣ. ಕರ್ನಾಟಕದ ಐಟಿ ನೈಪುಣ್ಯ ಮತ್ತು ಸಂಶೋಧನೆಗಳು ದೇಶವನ್ನು ಸ್ವಾವಲಂಬಿಯಾಗಿತ್ತವೆ ಎಂದರು.


ಕೊರೊನಾ ನಂತರ ಆರ್ಥಿಕ ಚೇತರಿಕೆಯಲ್ಲಿ ಕರ್ನಾಟಕದ ರೈತರು ಮತ್ತು ಉದ್ಯೋಗಗಿಳ ಕೊಡುಗೆಯನ್ನು ಪ್ರಧಾನಿ ಮೋದಿ ಸ್ಮರಿಸಿದರು. ಭಾರತವು ಬಲಿಷ್ಠವಾಗಬೇಕಾದರೆ ಆರ್ಥಿಕತೆಯಿಂದ ಸಾಧ್ಯವಿಲ್ಲ. ನಮಗೆ ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಬಲವೂ ಬೇಕು. ನಾನು ಶ್ರೀ ರವಿಶಂಕರ್ ಗೂರೂಜಿ ಅವರ ಆಶ್ರಮದಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಲ್ಲಿ ಧ್ಯಾನ ಮಂದಿರ ಉದ್ಘಾಟಿಸುತ್ತಿರುವುದು ನನ್ನ ಸೌಭಾಗ್ಯ ಎಂದರು.


ಆತ್ಮೀಯ ಸನ್ಮಾನ: ಅಭಿನಂದನೆ

ಇದಕ್ಕೂ ಮೊ೧ದಲ ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ ರಾಜ್ಯ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಯ ಭರ್ಜರಿ ಗೆಲುವಿಗೆ ಕಾರಣರಾದ ಪ್ರಧಾನಿ ಮೋದಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.


ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಐತಿಹಾಸಿಕ ಗೆಲುವಿನ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಬಂದ ಪ್ರಧಾನಿ ನರೇಂದ್ರ ಮೋದಿಯವರನ್ನು ವಿಮಾನ ನಿಲ್ದಾಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ವಿ. ಸೋಮಣ್ಣ, ಶೋಭ ಕರಂದ್ಲಾಜೆ, ರಾಜ್ಯ ಬಿಜೆಪಿ ಉಸ್ತುವಾರಿ ರಾಧ ಮೋಹನ್‌ದಾಸ್ ಅಗರ್ವಾಲ್, ಪ್ರತಿಪಕ್ಷ ನಾಯಕರುಗಳಾದ ಆರ್, ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಪಿ.ಸಿ. ಮೋಹನ್ ಇವರುಗಳು ಆತ್ಮೀಯವಾಗಿ ಬರ ಮಾಡಿಕೊಂಡು ವೇದಿಕೆಗೆ ಕರೆ ತಂದರು.


ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಮೈಸೂರು ಪೇಟೆ ತೊಡಿಸಿ, ರೇಷ್ಮೆ ಶಾಲು ಹೊದಿಸಿ ೧೩ ಕೆಜಿ ತೂಕದ ಮೋದಿ ಅವರ ಬೆಳ್ಳಿಯ ಪ್ರತಿಮೆಯನ್ನು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.