ಯಾದಗಿರಿ:ಜೂ.14: ಬೆಂಗಳೂರು ಸಿಂಗಾಪೂರ ಮಾಡುವತ್ತ ನಮ್ಮ ಸರ್ಕಾರ ಹೆಜ್ಜೆ ಇಟ್ಟಿರುವುದು ಸಂತೋಷದ ವಿಚಾರ. ಆದರೆ ಕಲ್ಯಾಣ ಕರ್ನಾಟಕ ಭಾಗವನ್ನು ಬೆಂಗಳೂರು-ಮೈಸೂರು ಮಾದರಿಯಲ್ಲಿ ಅಭಿವೃದ್ದಿಯಾದರೆ ಇಲ್ಲಿನ ಜನ ರಾಜ್ಯ ಸರ್ಕಾರಕ್ಕೆ ಚಿರರುಣಿಯಾಗುತ್ತದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಯಾದಗಿರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಶನಿವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ “ಆರೋಗ್ಯ ಅವಿಷ್ಕಾರ” ಕಾರ್ಯಕ್ರಮದಡಿ ಭಾಗವಹಿಸಿ ಮಾತನಾಡಿದ ಅವರು, ಸಿ.ಎಂ. ಸಿದ್ದರಾಮಯ್ಯ ನವರ ಮೈಸೂರು ಮತ್ತು ಡಿ.ಕೆ.ಶಿವಕುಮಾರ ಅವರ ಬೆಂಗಳೂರಿನಂತೆ ಈ ಪ್ರದೇಶದ ಅಭಿವೃದ್ಧಿ ಮಾಡಿದರೆ ಜನ ನಿಮ್ಮನ್ನು ಮರೆಯಲ್ಲ ಎಂದು ವೇದಿಕೆ ಮೇಲಿದ್ದ ಸಿ.ಎಂ. ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಸಲಹೆ ನೀಡಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರಸಕ್ತ 2025-26ನೇ ಸಾಲಿಗೆ 5,000 ಕೋಟಿ ರೂ. ಅನುದಾನ ನೀಡಿದ್ದು, ಅಷ್ಟು ಹಣ ಇದೇ ವರ್ಷದಲ್ಲಿ ಖರ್ಚು ಮಾಡುವ ಮೂಲಕ ಪ್ರದೇಶದ ಜನರ ಅಭ್ಯುದಯಕ್ಕೆ ಶ್ರಮಿಸಬೇಕು. ಇಂದಿಲ್ಲಿ ಚಾಲನೆ ನೀಡಿದ ಎಲ್ಲಾ ಕೆಲಸಗಳು ಇದೇ ವರ್ಷದಲ್ಲಿ ಪೂರ್ಣಗೊಳಿಸಿ ಮುಂದಿನ ವರ್ಷ ಮತ್ತೆ ಹೊಸ ಯೋಜನೆಗಳತ್ತ ಮುಂದಾಗಬೇಕು ಎಂದರು.
ಪ್ರದೇಶದಲ್ಲಿ ಶಿಕ್ಷಕರ ಕೊರತೆ ಕಾರಣ ಇಲ್ಲಿನ ಶಿಕ್ಷಣ ವ್ಯವಸ್ಥೆ, ಗುಣಮಟ್ಟ ಕುಂಠಿತವಾಗಿದೆ. ಗಣಿತ, ವಿಜ್ಞಾನ, ಆಂಗ್ಲ ಶಿಕ್ಷಕರ ಕೊರತೆ ಹೆಚ್ಚಿದೆ. ಬೇರೆ ಪ್ರದೇಶದಿಂದ ನೇಮಕವಾದ ಶಿಕ್ಷಕರು ಒಂದೇ ವರ್ಷದಲ್ಲಿ ವರ್ಗಾವಣೆ ಮಾಡಿಕೊಂಡು ಹೋಗುವ ದುಸ್ಥಿತಿ ಇಲ್ಲಿದೆ. ಪರಿಣಾಮ ಎಸ್.ಎಸ್.ಎಲ್.ಸಿ, ಪಿ.ಯು.ಸಿಯಲ್ಲಿ ಪ್ರದೇಶದ ಜಿಲ್ಲೆಗಳನ್ನು ರ್ಯಾಂಕ್ ಪಟ್ಟಿಯಲ್ಲಿ ಕೆಳಗಿನಿಂದ ನೋಡಬೇಕಾದ ಅನಿವಾರ್ಯತೆವಿದೆ. ಪ್ರದೇಶದಲ್ಲಿ ಉದ್ಯೋಗ ನೇಮಕಾತಿಗೆ 371ಜೆ ಕಾಯ್ದೆಯಲ್ಲಿ ಹಣಕಾಸು ಇಲಾಖೆ ಅನುಮೋದನೆ ಪಡೆಯುವ ಅವಶ್ಯಕತೆ ಇಲ್ಲ. ಹೀಗಾಗಿ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ಸ್ಥಳೀಯವರಿಗೆ ಉದ್ಯೋಗ ನೀಡುವತ್ತ ಗಮನಹರಿಸಬೇಕು ಎಂದರು.
ಕಲ್ಯಾಣದ ಅಭಿವೃದ್ಧಿ ರಥಕ್ಕೆ ಚಾಲನೆ: ರಾಜ್ಯದ ಉಪ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರು ಮಾತನಾಡಿ, ಇಂದಿಲ್ಲಿ ಪ್ರದೇಶದ ಆರೋಗ್ಯ ಸುಧಾರಣೆಗೆ 411.88 ಕೋಟಿ ರೂ. ಕಾಮಗಾರಿಗೆ ಚಾಲನೆ ನೀಡಿರುವುದು ಪ್ರದೇಶದ ಅರೋಗ್ಯ ಕ್ರಾಂತಿಗೆ ಮುನ್ನುಡಿ ಬರೆದಿದೆ. ಇಂದಿಲ್ಲಿ ಪ್ರದೇಶದ ಅಭಿವೃದ್ಧಿ ರಥಕ್ಕೆ ನಾವು ಚಾಲನೆ ನೀಡಿದ್ದೇವೆ ಎಂದರು.
ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಜಾರಿಗೆ ತಂದಿದ್ದು, ಜನರ ಬದುಕು ಗಟ್ಟಿಗೊಳಿಸಿವೆ. ವಿರೋಧ ಪಕ್ಷಗಳು ಏನೇ ಹೇಳಿದರು ಬಡವರ ಹೊಟ್ಟೆ ತುಂಬಿಸುವ ಯೋಜನೆ ಮುಂದುವರೆಯಲಿವೆ ಎಂದ ಅವರು ಗ್ಯಾರಂಟಿ ಜೊತೆಗೆ ಆರೋಗ್ಯ, ಶಿಕ್ಷಣ, ರಸ್ತೆ, ಗ್ರಾಮೀಣಾಭಿವೃದ್ಧಿ, ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಪ್ರದೇಶದ ಸವಾರ್ಂಗೀಣ ಅಭಿವೃದ್ಧಿಗೆ 371ಜೆ ಜಾರಿಗೆ ತಂದ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯ ಶತ-ಶತಮಾನದ ವರೆಗೂ ಜನ ಮರೆಯಲು ಸಾಧ್ಯವಿಲ್ಲ ಎಂದರು.
ಪಕ್ಷಭೇದ ಮರೆತು ಅಭಿವೃದ್ದಿ ಕಾರ್ಯ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಮಾತನಾಡಿ, ಕಳೆದ ಸೆಪ್ಟೆಂಬರ್‍ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆ.ಕೆ.ಆರ್.ಡಿ.ಬಿ ಮಂಡಳಿ ಸಹಯೋಗದೊಂದಿಗೆ 857 ಕೋಟಿ ರೂ. ವೆಚ್ಚದ ಆರೋಗ್ಯ ಇಲಾಖೆಯ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದು, ಅದರಲ್ಲಿ ಮೊದಲನೇ ಹಂತವಾಗಿ 411 ಕೋಟಿ ರೂ. ವೆಚ್ಚದ ಕೆಲಸಕ್ಕೆ ಇಂದಿಲ್ಲಿ ಚಾಲನೆ ನೀಡಿದ್ದು, ನಾಳೆಯಿಂದಲೇ ಕೆಲಸ ಶುರುವಾಗಲಿದೆ. ಮುಂದಿನ 2-3 ತಿಂಗಳಲ್ಲಿ ಉಳಿದ 453 ಕೋಟಿ ರೂ. ಕೆಲಸಕ್ಕೂ ಚಾಲನೆ ನೀಡಲಾಗುವುದು. ನಾವು ಪಕ್ಷ ಬೇಧ ಮರೆತು ಪ್ರದೇಶದ ಎಲ್ಲಾ ಕ್ಷೇತ್ರದಲ್ಲಿ ಆರೋಗ್ಯ ಸಂಸ್ಥೆಗಳ ಸುಧಾರಣೆಗೆ ಮುಂದಾಗಿದ್ದೇವೆ ಎಂದರು.
ಆರೋಗ್ಯ ಶಿಕ್ಷಣ ಅಭಿವೃದ್ಧಿಯಾಗದ ಹೊರತು ಸವಾರ್ಂಗೀಣ ಅಭಿವೃದ್ಧಿ ಅಸಾಧ್ಯ. ಪ್ರದೇಶದಲ್ಲಿ ಮಾನವ ಅಭಿವೃದ್ದಿ ಉತ್ತಮಗೊಳಿಸಲು ಇಂದಿಲ್ಲಿ ಸುಮಾರು 41 ಕಾಮಗಾರಿಗಳಿಗೆ ಚಾಲನೆ ದೊರೆತಿದೆ. ಮುಂದಿನ ದಿನದಲ್ಲಿ ಶಹಾಪೂರ, ದೆವದುರ್ಗದಲ್ಲಿ ತಲಾ 19 ಕೋಟಿ ರೂ. ವೆಚ್ಚದಲ್ಲಿ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಇದಲ್ಲದೆ ರಾಜ್ಯದಾದ್ಯಂತ 63 ಡೈಲಾಸಿಸ್ ಘಟಕ ಸ್ಥಾಪಿಸಲಾಗುತ್ತಿದೆ. ಒಟ್ಟಾರೆ ಇಂದಿನ ಕಾರ್ಯಕ್ರಮ ಆರೋಗ್ಯ ಇಲಾಖೆಯ ಇತಿಹಾಸದಲ್ಲಿಯೇ ಐತಿಹಾಸಿಕವಾಗಿದೆ ಎಂದರು.
ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಅವರು ಮಾತನಾಡಿ, ಯಾದಗಿರಿ ಜಿಲ್ಲೆಯ ಅಭಿವೃದ್ಧಿಗೆ ಸಿ.ಎಂ.ಸಿದ್ದರಾಮಯ್ಯ ಅವರು ಹೆಚ್ಚಿನ ಒತ್ತು ನೀಡುತ್ತಿದ್ದು, ಇದರಿಂದ ಗಿರಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಮರು ಜೀವ ಸಿಕ್ಕಿದೆ ಎಂದರು.
2 ವರ್ಷದಲ್ಲಿ 13,000 ಕೋಟಿ ರೂ.: ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ಪ್ರಸಕ್ತ ಸಾಲಿಗೆ ರಾಜ್ಯ ಸರ್ಕಾರ 5,000 ಕೋಟಿ ರೂವ. ಅನುದಾನ ನೀಡುವ ಮೂಲಕ ಪ್ರದೇಶದ ಅಭುವೃದ್ಧಿಗೆ ತನ್ನ ಬದ್ದತೆ ಪ್ರದರ್ಶಿಸಿದ್ದು, ಕಳೆದ ಎರಡು ವರ್ಷದಲ್ಲಿ ಮಂಡಳಿಯಿಂದ 13,000 ಕೋಟಿ ರೂ. ಪ್ರದೇಶದ ಮೂಲಸೌಕರ್ಯ ಬಲವರ್ಧನೆಗೆ ವ್ಯಯ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದರು.
ಮಂಡಳಿಯು ಪ್ರದೇಶದಲ್ಲಿ ಸುಸ್ಥಿರ ಅಭಿವೃದ್ದಿಗೆ ಅರೋಗ್ಯ ಆವಿಷ್ಕಾರ, ಅಕ್ಷರ ಆವಿಷ್ಕಾರ, ಉದ್ಯೋಗ ಆವಿಷ್ಕಾರ, ಅರಣ್ಯ ಆವಿಷ್ಕಾರ ಯೋಜನೆಗಳನ್ನು ಹಾಕಿಕೊಂಡಿವೆ. 358 ಕೋಟಿ ರೂ. ವೆಚ್ಚದಲ್ಲಿ ಅಲ್ಪಸಂಖ್ಯಾತ, 154 ಕೋಟಿ ರೂ. ವೆಚ್ಚದಲ್ಲಿ ಬಿ.ಸಿ.ಎಂ ಹಾಗೂ 286 ಕೋಟಿ ರೂ. ವೆಚ್ಚದಲ್ಲಿ ಎಸ್.ಸಿ-ಎಸ್.ಟಿ ವಸತಿ ನಿಲಯ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಮಹಿಳೆಯರಿಗೆ ಶೌಚಾಲಯ ನಿರ್ಮಾಣ, ರೈತರಿಗೆ ಗೋದಾಮು ಸ್ಥಾಪನೆ ಮಾಡಲಾಗುತ್ತಿದೆ. ಇದರಿಂದ ಸರ್ವ ಸಮುದಾಯ ಪ್ರಗತಿ ನಮ್ಮ ಗುರಿಯಾಗಿದೆ. ಕಳೆದ ಡಿಸೆಂಬರ್‍ನಲ್ಲಿ ಕಲಬುರಗಿಯ ಜಯದೇವ ಹೃದ್ರೋಗ ಆಸ್ಪತ್ರೆ ಲೋಕಾರ್ಪಣೆ ಮಾಡಿದ್ದು, ಇದು ಪ್ರದೇಶದ ಆರೋಗ್ಯ ಮುಕುಟವಾಗಿ ಗುರುತಿಸಿಕೊಂಡಿದೆ ಎಂದರು.
ಯಾದಗಿರಿ ಜಿಲ್ಲೆಯಲ್ಲಿ ಕಳೆದ 2 ವರ್ಷದಲ್ಲಿ 1,200 ಕೋಟಿ ರೂ. ಮಂಡಳಿ ಖರ್ಚು ಮಾಡಿದೆ. ಮುಂದಿನ ದಿನದಲ್ಲಿ ಕಲಬುರಗಿಯಲ್ಲಿ ನಿಮ್ಹಾನ್ಸ್ ಶಾಖೆ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಶಹಾಪುರ-ಯಾದಗಿರಿಯಲ್ಲಿ ತಾಯಿ-ಮಕ್ಕಳ ಆಸ್ಪತ್ರೆ, ಕೊಪ್ಪಳ ಮತ್ತು ರಾಯಚೂರಿನಲ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೂ ಮಂಡಳಿ ಮುಂದಾಗಿದೆ. ಇದಲ್ಲದೆ ಯಾದಗಿರಿಯ ಮುಂಡರಗಿಯಲ್ಲಿ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಇಂಡಸ್ಟ್ರಿ ಹಬ್ ಮಾಡಲಾಗುತ್ತಿದೆ ಎಂದರು.