ಪಾಕಿಸ್ತಾನದಲ್ಲಿ ಉಗ್ರರಿಗೆ ಭಯವಿಲ್ಲ:ಜೈಶಂಕರ್

ನವದೆಹಲಿ,ಮೇ೨೩:ಪಾಕಿಸ್ತಾನದ ದೊಡ್ಡ ನಗರಗಳಲ್ಲಿ ಯಾರ ಭಯವೂ ಇಲ್ಲದೆ ಭಯೋತ್ಪಾದಕರು ಸುತ್ತಾಡುತ್ತಿದ್ದಾರೆ. ಉಗ್ರರಿಗೆ ಪಾಕ್ ಸೇನೆ ಬೆಂಬಲ ನೀಡುತ್ತಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಪ್ರಸ್ತುತ ನೆದರ್‌ಲ್ಯಾಂಡ್ ಪ್ರವಾಸದಲ್ಲಿರುವ ಅವರು, ಡಚ್ ಪತ್ರಿಕೆಗೆ ಸಂದರ್ಶನ ನೀಡಿರುವ ಅವರು, ಪಾಕಿಸ್ತಾನ ಮತ್ತು ಸೇನೆ ಭಯೋತ್ಪಾದನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
ಪಾಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಜಾಲದ ಬಗ್ಗೆ ತಿಳಿದಿಲ್ಲ ಎಂದು ಭಾವಿಸುವುದು
ತಪ್ಪು ಕಲ್ಪನೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಭವಿಷ್ಯದಲ್ಲಿ ಭಯೋತ್ಪಾದಕ ದಾಳಿಗಳು ನಡೆದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿರುವ ಅವರು, ಪಾಕಿಸ್ತಾನ ಯಾವುದೇ ದಾಳಿ ಮಾಡಿದರೂ ಸೂಕ್ತ ಪ್ರತ್ಯುತ್ತರ ನೀಡುತ್ತೇವೆ. ಇದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು ಎಂದರು.
ಭಯೋತ್ಪಾದನೆ ಮತ್ತು ಕಾಶ್ಮೀರ ಸಮಸ್ಯೆಯನ್ನು ಒಟ್ಟಿಗೆ ಕೊಂಡೊಯ್ಯಲು ಸಾಧ್ಯವಿಲ್ಲ. ಭಯೋತ್ಪಾದನೆ sಅಂತಾರಾಷ್ಟ್ರೀಯ ಅಪರಾಧವಾಗಿದ್ದು, ಅದನ್ನು ಯಾವುದೇ ರೀತಿಯಲ್ಲೂ ಸಮರ್ಥಿಸಲು ಸಾಧ್ಯವಿಲ್ಲ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಹಿಂದಿರುಗಿಸಬೇಕು ಎಂದು ಒತ್ತಾಯಿಸಿದರು.
ಕಾಶ್ಮೀರ ವಿವಾದ ಭಾರತ-ಪಾಕಿಸ್ತಾನ ನಡುವಣ ದ್ವಿಪಕ್ಷೀಯ ವಿಚಾರವಾಗಿದೆ. ಈ ಬಗ್ಗೆ ೩ನೇ ವ್ಯಕ್ತಿ ಮೂಗು ತೂರಿಸುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಭಾರತ-ನೆದರ್‌ಲ್ಯಾಂಡ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದು ತಮ್ಮ ಭೇಟಿಯ ಉದ್ದೇಶವಾಗಿದೆ. ಯುರೋಪಿಯನ್ ಒಕ್ಕೂಟವು ಭಾರತದ ೨ನೇ ಅತೀ ದೊಡ್ಡ ಪಾಲುದಾರವಾಗಿದೆ. ಹೀಗಾಗಿ ಜೈಶಂಕರ್ ಭೇಟಿ ಮಹತ್ವ ಪಡೆದುಕೊಂಡಿದೆ.