
ಪಾಟ್ನಾ, ನ. ೧೫- ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ದಿಗ್ವಿಜಯ ಸಾಧಿಸಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಯುಗೆ ಬಿಟ್ಟು ಕೊಡುವುದು ನಿಚ್ಚಳವಾಗಿದ್ದು, ಹಾಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ೧೦ನೇ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿದ್ದಾರೆ.
ಬಿಜೆಪಿ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ ಬಿಜೆಪಿಯವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಚರ್ಚೆಗಳು ನಡೆದಿವೆಯಾದರೂ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಮುನ್ನಡೆಸಿರುವ ನಿತೀಶ್‌ಕುಮಾರ್ ರವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವ ಸಾಧ್ಯತೆಗಳು ಕಡಿಮೆ ಇದ್ದು, ನಿತೀಶ್‌ಕುಮಾರ್ ರವರೇ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸುಶಾಸನ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿ ಯಾವುದೇ ಕಳಂಕಗಳು ಇಲ್ಲದೆ ಕಾರ್ಯನಿರ್ವಹಿಸಿರುವ ಹಾಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ರವರನ್ನು ಬಿಟ್ಟು ಕೊಡುವುದು ಬೇಡ, ಅವರೇ ಮುಖ್ಯಮಂತ್ರಿ ಆಗಲಿ ಎಂಬ ನಿಲುವನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ ಎನ್ನಲಾಗಿದ್ದು, ನಿತೀಶ್‌ಕುಮಾರ್ ರವರೇ ಬಿಹಾರದ ಮುಂದಿನ ಮುಖ್ಯಮಂತ್ರಿ ಆಗುವುದು ಬಹುತೇಕ ನಿಶ್ಚಿತ.
ಬಿಹಾರದ ಈಗಿನ ರಾಜಕೀಯ ಸ್ಥಿತಿಗತಿಗಳನ್ನು ಗಮನಿಸಿದರೆ ನಿತೀಶ್‌ಕುಮಾರ್ ರವರ ಪರ ಒಲವು ಹೆಚ್ಚಿದ್ದು, ಅವರೇ ಮುಖ್ಯಮಂತ್ರಿಯಾಗಲಿದ್ದಾರೆ.
ಎನ್‌ಡಿಎ ಮಿತ್ರ ಪಕ್ಷಗಳಾದ ಎಲ್‌ಜೆಪಿ, ಹಿಂದೂಸ್ಥಾನ ಅವಾಮ್ ಮೋರ್ಚಾ ಸಹ ನಿತೀಶ್‌ಕುಮಾರ್ ರವರ ಪರ ಒಲವು ಹೊಂದಿದೆ ಎಂದು ಹೇಳಲಾಗಿದ್ದು, ಬಿಜೆಪಿ ಮತ್ತು ಎಲ್‌ಜೆಪಿಗೆ ಉಪಮುಖ್ಯಮಂತ್ರಿ ಸ್ಥಾನಗಳನ್ನು ನೀಡುವ ತೀರ್ಮಾನವನ್ನು ಎನ್‌ಡಿಎ ಮಾಡಲಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ಹೇಳಿವೆ.
ಹಿಂದೂಸ್ಥಾನ್ ಅವಾಮ್ ಮೋರ್ಚಾದ ನಾಯಕ ಸಂತೋಷ್‌ಕುಮಾರ್ ಮೆನನ್ ಇಂದು ನಿತೀಶ್‌ಕುಮಾರ್ ರವರನ್ನು ಭೇಟಿ ಮಾಡಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ೨೦೨ ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ ೮೯ ಸ್ಥಾನಗಳನ್ನು, ಜೆಡಿಯು ೮೫ ಸ್ಥಾನಗಳನ್ನು, ಹಾಗೆಯೇ ಎಲ್‌ಜೆಪಿ ೧೯ ಸ್ಥಾನಗಳನ್ನು ಗೆದ್ದಿದೆ. ಈ ಗೆಲುವಿಗೆ ನಿತೀಶ್‌ಕುಮಾರ್, ಮೋದಿ ಜೋಡಿ ಕಾರಣವಾಗಿದೆ.
ನಿತೀಶ್‌ಕುಮಾರ್ ರವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವುದು ಸೂಕ್ತ ಎಂಬ ಅಭಿಪ್ರಾಯಗಳು ಎನ್‌ಡಿಎನಲ್ಲಿ ವ್ಯಕ್ತವಾಗಿದ್ದು, ನಿತೀಶ್‌ಕುಮಾರ್ ಬಿಹಾರದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿದ್ದಾರೆ. ಈ ಬಗ್ಗೆ ಎನ್‌ಡಿಎ ಇನ್ನೆರಡು ದಿನಗಳಲ್ಲಿ ತನ್ನ ನಿರ್ಧಾರ ಪ್ರಕಟಿಸಲಿದೆ.
ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಿ ಯಾರು ಅಧಿಕಾರ ವಹಿಸಿಕೊಳ್ಳಲಿದ್ದಾರೆ, ನಿತೀಶ್‌ಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆಯೇ ಎನ್ನುವ ಚರ್ಚೆಗಳು ನಡೆದಿರುವಾಗಲೇ ನಿತೀಶ್‌ಕುಮಾರ್ ರವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಿವೆ.
ಬಿಜೆಪಿಯ ಆರ್.ಕೆ. ಸಿಂಗ್ ಅಮಾನತ್ತು
ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಕೇಂದ್ರದ ಮಾಜಿ ಸಚಿವ ಆರ್.ಕೆ. ಸಿಂಗ್ ಅವರನ್ನು ಬಿಜೆಪಿ ಇಂದು ಅಮಾನತ್ತು ಮಾಡಿದೆ.
ಆರ್.ಕೆ. ಸಿಂಗ್ ಅವರು ನರೇಂದ್ರ ಮೋದಿಯವರ ಸರ್ಕಾರದಲ್ಲಿ ಈ ಹಿಂದೆ ಇಂಧನ ಸಚಿವರಾಗಿದ್ದರು. ಇತ್ತೀಚೆಗೆ ಅವರು ಎನ್‌ಡಿಎ ನಾಯಕರ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಹಾಗಾಗಿ ಅವರನ್ನು ಪಕ್ಷದಿಂದ ಅಮಾನತ್ತು ಮಾಡಲಾಗಿದೆ. ಹಾಗೆಯೇ ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾದ ಅಶೋಕ್‌ಕುಮಾರ್ ಅಗರ್‌ವಾಲ್ ಮತ್ತು ಕತ್ತಿಹಾರ್‌ನ ಮಹಾಪೌರ ಉಷಾ ಅಗರ್‌ವಾಲ್ ರವರನ್ನು ಬಿಜೆಪಿ ಪಕ್ಷದಿಂದ ಅಮಾನತ್ತು ಮಾಡಿದೆ.

























