ನಿತೀನ್ ನಬಿನ್ ನನ್ನ ಬಾಸ್-ಮೋದಿ

ನವದೆಹಲಿ, ಜ. ೨೦- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ನನ್ನ ಬಾಸ್. ನಾನು ಕೇವಲ ಪಕ್ಷದ ಕಾರ್ಯಕರ್ತ ಪ್ರಧಾನಿ ನರೇಂದ್ರ ಮೋದಿ ಹೇಳಿದರು.


ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿಂದು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಬಿಜೆಪಿ ಒಂದು ಸಂಸ್ಕೃತಿ, ಬಿಜೆಪಿ ಒಂದು ಕುಟುಂಬ. ಇಲ್ಲಿ ನಮ್ಮ ಸಂಬಂಧಗಳು ನಮ್ಮ ಸದಸ್ಯತ್ವವನ್ನು ಮೀರಿವೆ. ನಮ್ಮ ಅಧ್ಯಕ್ಷರು ಬದಲಾಗುತ್ತಾರೆ. ನಮ್ಮ ಆದರ್ಶಗಳು ಬದಲಾಗುವುದಿಲ್ಲ ಎಂದರು.


ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ನಿತಿನ್ ನಬಿನ್ ನನ್ನ ಬಾಸ್ ಎಂದು ಪ್ರಧಾನಿ ಮೋದಿ ಹೇಳಿದಾಗ ಸಮಾರಂಭದಲ್ಲಿ ನೆರೆದಿದ್ದ ಎಲ್ಲರೂ ಭಾರೀ ಕರತಾಡನ ಮಾಡಿದರು.


ಇಂದು ದೇಶದ ಪ್ರತಿಯೊಂದು ಭಾಗದ ಜನರು ಬಿಜೆಪಿಯೊಂದಿಗೆ ಇದ್ದಾರೆ. ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಜಗತ್ತಿನಲ್ಲೇ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರು ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆ ಎಂದರು.


ನೂತನ ಅಧ್ಯಕ್ಷರಾಗಿರುವ ನಿತಿನ್ ನಬಿನ್ ಅವರಿಗೆ ಯುವಶಕ್ತಿ ಮತ್ತು ಸಂಘಟನೆಯಲ್ಲಿ ಕೆಲಸ ಮಾಡಿದ ದೀರ್ಘ ಅನುಭವವಿದೆ. ಈ ಅನುಭವ ಪಕ್ಷದ ಕಾರ್ಯಕರ್ತರಿಗೆ ಬಹಳ ಉಪಯುಕ್ತವಾಗಲಿದೆ ಎಂದರು.


ಮುಂದಿನ ೨೫ ವರ್ಷಗಳು ನಮಗೆ ಬಹಳ ಮುಖ್ಯ. ಅಭಿವೃದ್ಧಿ ಹೊಂದಿದ ವಿಕಸಿತ ಭಾರತವನ್ನು ನಿರ್ಮಿಸಬೇಕಾದ ಅವಧಿ ಇದಾಗಿದೆ ಎಂದು ಅವರು ಹೇಳಿದರು.