ಭಾಲ್ಕಿ :ಅ.1: ಗುಣಮಟ್ಟದ ಶಿಕ್ಷಣಕ್ಕೆ ದಿನ ಪತ್ರಿಕೆಗಳು, ವಾರ ಪತ್ರಿಕೆಗಳು, ಮಾಸಿಕ ಪತ್ರಿಕೆಗಳು ಸಹಕಾರಿಯಾಗಿವೆ ಎಂದು ನಿರ್ಮಲಾ ಕ್ರಿಯೇಟಿವ್ ಸ್ಟಡೀಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ ಅಭಿಪ್ರಾಯಪಟ್ಟರು.
ಪಟ್ಟಣದ ನಿರ್ಮಲಾ ಹಲಮಂಡಗೆ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಿರ್ಮಲಾ ಹಲಮಂಡಗೆ ಪದವಿ ಕಾಲೇಜು ಉತ್ತಮ ಹೆಜ್ಜೆ ಇಟ್ಟಿದೆ. ಇಲ್ಲಿಯ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಪತ್ರಿಕೆಯಲ್ಲಿಯ ಸುಭಾಷಿತ ಓದುವುದರೊಂದಿಗೆ ಕಾಲೇಜು ಪ್ರಾರಂಭಿಸಲಾಗುವುದು. ಜಿಲ್ಲೆಯಲ್ಲಿಯೇ ಎಲ್ಲರೂ ಗುರುತಿಸುವ ಕಾರ್ಯ ನಮ್ಮ ಶಿಕ್ಷಣ ಸಂಸ್ಥೆಯಿಂದ ನಡೆಯುತ್ತಲಿದೆ. ಪತ್ರಕರ್ತರು ಯಾವುದೇ ಭಯವಿಲ್ಲದೇ ಸತ್ಯ ವಿಷಯವನ್ನು ಪ್ರಕಟಿಸುವ ಕಾರ್ಯಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿರ್ಮಲಾ ಕ್ರಿಯೇಟಿವ್ ಸ್ಟಡೀಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಮರ ಹಲಮಂಡಗೆ, ಪತ್ರಕರ್ತರ ಕೆಲಸ ತುಂಬಾ ಕ್ಲಿಷ್ಟಕರ ಕೆಲಸವಾಗಿದೆ. ಸಮಾಜದ ಓರೆ, ಕೋರೆಗಳನ್ನು ತಿದ್ದುವ ನಿಟ್ಟಿನಲ್ಲಿ ವರದಿ ಮಾಡುವಾಗ ನಡೆಯುವ ಯಾವುದೇ ಅಹಿತಕರ ಘಟನೆಗಳಲ್ಲಿ ಪತ್ರಕರ್ತರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಪತ್ರಕರ್ತರು ತುಂಬಾ ಜಾಗೃತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು. ನಿರ್ಮಲಾ ಹಲಮಂಡಗೆ ಪದವಿ ಮಹಾವಿದ್ಯಾಲಯದ ಆಡಳಿತಾಧಿಕಾರಿ ಈಶ್ವರ ರುಮ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗಣಪತಿ ಬೋಚರೆ, ಹಿರಿಯ ಪತ್ರಕರ್ತ ಚಂದ್ರಕಾಂತ ಪಾಟೀಲ ಪತ್ರಕರ್ತರ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಇದೇವೇಳೆ ಕಾರ್ಯನಿರತ ಪತ್ರಕರ್ತರಿಗೆ ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂತೋಷ ಬಿಜಿಪಾಟೀಲ, ಪ್ರವೀಣ ಮೇತ್ರೆ, ದಿಲೀಪ ಶೇರಿಕಾರ, ತುಕಾರಾಮ ಮೋರೆ, ಇಂದ್ರಜೀತ ಪಾಂಚಾಳ, ನರೇಂದ್ರ ಸೋಮಸೆಟ್ಟಿ, ದೀಪಕ ಥಮಕೆ, ವಿನಾಯಕ ಸಿಂಧೆ, ಸಂಜು ನಾವದಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.























