ಹೊಸ ವರ್ಷಾಚರಣೆ: ಪ್ರವಾಸಿ ತಾಣಗಳಿಗೆ ನಿರ್ಬಂಧ

ತುಮಕೂರು, ಡಿ. ೩೧- ನೂತನ ವರ್ಷದ ಸಂಭ್ರಮಾಚರಣೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಡಿ. ೩೧ರ ಬೆಳಿಗ್ಗೆ ೮ ರಿಂದ ಜ. ೨ ರ ಬೆಳಿಗ್ಗೆ ೮ ಗಂಟೆಯ ವರೆಗೆ ಜಿಲ್ಲೆಯ ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾ ಪೊಲೀಸ್ ಇಲಾಖೆ ಹೊಸ ವರ್ಷಾಚರಣೆಗೆ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.


ತಾಲ್ಲೂಕಿನ ನಾಮದ ಚಿಲುಮೆ, ದೇವರಾಯನದುರ್ಗ ಹಾಗೂ ಬಸದಿಬೆಟ್ಟಕ್ಕೆ ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಿಲ್ಲ. ಡಿ. ೩೧ ರಂದು ಬೆಳಿಗ್ಗೆ ೮ ಗಂಟೆಯಿಂದ ಜ. ೧ ರಂದು ಬೆಳಿಗ್ಗೆ ೬ರ ವರೆಗೆ ಮತ್ತು ಜ. ೧ ರಂದು ಸಂಜೆ ೬ ಗಂಟೆಯಿಂದ ಜ. ೨ ರ ಬೆಳಿಗ್ಗೆ ೮ ಗಂಟೆಯ ವರೆಗೆ ಈ ಪ್ರದೇಶದಲ್ಲಿ ಸಾರ್ವಜನಿಕರು ಮತ್ತು ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ತಿಳಿಸಿದ್ದಾರೆ.


ಸಾರ್ವಜನಿಕರ ಹಿತದೃಷ್ಟಿಯಿಂದ ಸಂರಕ್ಷಿತ ಅರಣ್ಯ ಪ್ರದೇಶ ಮತ್ತು ಅಪಘಾತ ವಲಯದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.


ಸಾರ್ವಜನಿಕರು ಸುರಕ್ಷಿತವಾಗಿ ಹೊಸ ವರ್ಷ ಆಚರಿಸಬೇಕು. ವಿದ್ಯಾಸಂಸ್ಥೆ ಮುಖ್ಯಸ್ಥರು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸಂಸ್ಥೆಯ ಆವರಣ, ಹಾಸ್ಟೆಲ್‌ಗಳಲ್ಲಿ ಶಿಸ್ತಿನ ಚೌಕಟ್ಟು ಮೀರದಂತೆ ನೋಡಿಕೊಳ್ಳಬೇಕು. ಸವಾರರು ವ್ಹೀಲಿಂಗ್ ಮತ್ತು ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.


ರಸ್ತೆಯಲ್ಲಿ ಮೋಟಾರ್ ಸೈಕಲ್ ಮತ್ತು ಕಾರು ಚಾಲನೆ ಮಾಡುವವರು, ಇತರೆ ಸಾರ್ವಜನಿಕರಿಗೆ ಅನಾನುಕೂಲವಾಗುವಂತೆ ಅಪಾಯಕಾರಿಯಾಗಿ ಮತ್ತು ನಿಷ್ಕಾಳಜಿತನದಿಂದ ವಾಹನವನ್ನು ಚಾಲನೆ ಮಾಡದಿರುವುದು. ವ್ಹೀಲಿಂಗ್ ಮತ್ತು ಡ್ರಾಗ್ ರೇಸಿಂಗ್ ಮಾಡುವವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.


ವರ್ಷಾಚರಣೆ ಸಂದರ್ಭದಲ್ಲಿ ಇತರೆ ಸಾರ್ವಜನಿಕರಿಗೆ ವಿಶೇಷವಾಗಿ ಮಹಿಳೆಯರಿಗೆ ಕೆಣಕುವುದು ಮಾಡಬಾರದು ಮತ್ತು ಇತರರೊಂದಿಗೆ ಸಭ್ಯವಾಗಿ ನಾಗರೀಕತೆಯಿಂದ ವರ್ತಿಸಬೇಕು. ಅನಾವಶ್ಯಕವಾಗಿ ಇತರೆ ಗುಂಪುಗಳೊಂದಿಗೆ ಜಗಳಕ್ಕಿಳಿದು ಗಲಾಟೆ ಮಾಡಿಕೊಳ್ಳಬಾರದು ಎಂದು ಎಚ್ಚರಿಸಿದ್ದಾರೆ.


ಜಿಲ್ಲೆಯ ನಾಗರಿಕರಿಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳನ್ನು ಕೋರಿದ ಅವರು, ಹೊಸ ವರ್ಷವು ಯಾವುದೇ ಅಹಿತಕರ ಘಟನೆಗಳಿಂದ ಮುಕ್ತವಾಗಿರುತ್ತದೆ. ಎಲ್ಲಾ ಮುಂಜಾಗ್ರತಾ ಕ್ರಮವನ್ನು ಅನುಸರಿಸಿ ಹೊಸ ವರ್ಷ ಆಚರಿಸಲಿ ಎಂದು ಹಾರೈಸಿದ್ದಾರೆ.