ಹೊಸ ವರ್ಷಾಚರಣೆ: ಬಹುತೇಕ ಶಾಂತಿಯುತ

ಬೆಂಗಳೂರು,ಜ.೧-ಹಳೆಯ ೨೦೨೫ಕ್ಕೆ ಬೈಬೈ ಹೇಳಿ ಹೊಸ ವರ್ಷ ೨೦೨೬ಕ್ಕೆ ಜನರು ಹಾಯ್ ಹೇಳಿದ ಸಂಭ್ರಮಾಚರಣೆ ವೇಳೆ ನಗರ ಸೇರಿ ರಾಜ್ಯದ ಕೆಲವೆಡೆ ಸಣ್ಣಪುಟ್ಟ ಗಲಾಟೆ ಹೊಡೆದಾಟ ನಡೆದಿರುವುದನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿದೆ.


ಕಾರ್ಪೋರೇಷನ್ ಸರ್ಕಲ್ ಬಳಿ ನಡುರಸ್ತೆಯಲ್ಲೇ ಇಂದು ಮುಂಜಾನೆ ಕ್ಯಾಬ್ ಚಾಲಕನ ಮೇಲೆ ಕ್ಷುಲಕ ಕಾರಣಕ್ಕೆ ೧೦ಕ್ಕೂ ಹೆಚ್ಚು ಪುಂಡರು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮುಂಜಾನೆ ೩.೧೫ರ ವೇಳೆಗೆ ನಡೆದ ಹಲ್ಲೆಯ ಸುದ್ದಿ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಸ್ಥಿತಿ ಶಮನಗೊಳಿಸಿದ್ದಾರೆ.

ಹೊಸ ವರ್ಷ ಆಚರಣೆ ವೇಳೆ ಕುಡಿದ ಮತ್ತಿನಲ್ಲಿ ಓಡಾಡುತ್ತಿದ್ದ ಯುವಕರ ಗುಂಪೊಂದು, ಕಾರ್ಪೋರೇಷನ್ ಸರ್ಕಲ್ ಬಳಿ ನಿಂತಿದ್ದ ಕಾರಿಗೆ ಹಿಂದಿನಿಂದ ಬಂದು ಟಚ್ ಮಾಡಿದಾಗ ಕಾರಿನ ಚಾಲಕ ಕೆಳಗೆ ಇಳಿದು, ಏಕೆ ಕಾರಿಗೆ ಡಿಕ್ಕಿ ಹೊಡೆದಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಉತ್ತರ ನೀಡುವ ಬದಲು ಯುವಕರ ಗುಂಪು ಚಾಲಕನ ಮೇಲೆ ಹಿಂದಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದೆ. ಮಾತಿಗೆ ಮಾತು ಬೆಳೆದು ಗಲಾಟೆ ತಾರಕಕ್ಕೆ ಏರಿದೆ. ಕುಡಿದ ಮತ್ತಿನಲ್ಲಿ ಇದ್ದ ಯುವಕರು ಚಾಲಕನನ್ನು ಸುತ್ತುವರೆದು ನಡುರಸ್ತೆಯಲ್ಲೇ ತಳ್ಳಾಟ, ಹೊಡೆದಾಟಕ್ಕೆ ಇಳಿದಿದ್ದಾರೆ.

ಚಾಲಕನ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡು ಸ್ಥಳದಲ್ಲಿದ್ದ ಇತರ ಕ್ಯಾಬ್ ಮತ್ತು ಕಾರು ಚಾಲಕರು ಜಗಳ ಬಿಡಿಸಲು ಮುಂದಾಗಿದ್ದಾರೆ. ಆದರೆ ಇದರಿಂದ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಂಡಿದ್ದು, ಹಲ್ಲೆಗಿಳಿದ ಯುವಕರು ಬೇರೆ ಚಾಲಕರ ಮೇಲೆಯೂ ದಾಳಿ ಮಾಡಲು ಯತ್ನಿಸಿದ್ದಾರೆ. ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿದ ಯುವಕರ ಅಟ್ಟಹಾಸದಿಂದ ಕೆಲಕಾಲ ಕಾರ್ಪೋರೇಷನ್ ಸರ್ಕಲ್ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ನಡುರಸ್ತೆಯಲ್ಲಿ ಕಾರು ಚಾಲಕನನ್ನು ನೆಲಕ್ಕೆ ಕೆಡವಿ, ಕಾಲಿನಿಂದಲೂ ಹೊಡೆಯಲು ಯತ್ನಿಸಿರುವ ದೃಶ್ಯಗಳು ಸ್ಥಳೀಯರಲ್ಲಿ ಭೀತಿ ಮೂಡಿಸಿವೆ.

ಆರೋಪಿಗಳಿಗೆ ಶೋಧ:
ಘಟನೆಯ ವೇಳೆ ಸ್ಥಳದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು, ವಾಹನ ಸವಾರರು ಭಯಭೀತರಾಗಿದ್ದಾರೆ. ಮಾಹಿತಿ ತಿಳಿದ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಹಲ್ಲೆಗೊಳಗಾದ ಕ್ಯಾಬ್ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.

ಅನುಚಿತ ವರ್ತನೆ:
ಚರ್ಚ್ ಸ್ಟ್ರೀಟ್‌ನಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಕುಡಿದ ಮತ್ತಿನಲ್ಲಿ ಓರ್ವ ವ್ಯಕ್ತಿ ಮಹಿಳಾ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿರುವಂತಹ ಘಟನೆ ನಡೆದಿದ್ದು, ಆತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಬಂದೋಬಸ್ತನಲ್ಲಿದ್ದಾಗ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ್ದಾನೆ. ಪೊಲೀಸರು ಆತನನ್ನು ಸಮಾಧಾನ ಮಾಡಲು ಮುಂದಾದಾಗ ಮತ್ತೆ ಕಿರಿಕ್ ಮಾಡಿದ್ದಾನೆ. ಕೂಡಲೇ ಅಲ್ಲಿದ್ದ ಇನ್ಸ್‌ಪೆಕ್ಟರ್ ಕಪಾಳಕ್ಕೆ ಬಿಗಿದು ಎಳೆದು ಹೊರ ತಂದಿದ್ದಾರೆ. ಕೋರಮಂಗಲದಲ್ಲಿ ಕುಡಿದು ತೂರಾಡುತ್ತಿದ್ದ ಯುವಕನಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಕೊನೆಗೆ ಪೊಲೀಸರೇ ಆತನನ್ನು ಕರೆದೊಯ್ದು ಬದಿಗೆ ಕೂರಿಸಿದ್ದಾರೆ.

ರೆಸಾರ್ಟ್ ಮೇಲೆ ದಾಳಿ:
ದೊಡ್ಡಬಳ್ಳಾಪುರದ ಹೆಗ್ಗಡಿಹಳ್ಳಿ ಬಳಿಯ ಈಚೀಸ್ ರೆಸಾರ್ಟ್‌ನಲ್ಲಿ ಅನುಮತಿ ಇಲ್ಲದೇ ಪಾರ್ಟಿ ನಡೆಸುತ್ತಿದ್ದ ಮಾಹಿತಿ ಆಧರಿಸಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಸುಮಾರು ೪೦ ಮಂದಿ ಯುವಕರಿಂದ ಪಾರ್ಟಿ ಆಯೋಜನೆ ಮಾಡಲಾಗಿತ್ತು. ದಾಳಿ ವೇಳೆ ನೂರಾರು ಬಾಟಲಿ ಮದ್ಯ ವಶಕ್ಕೆ ಪಡೆಯಲಾಗಿದೆ, ಸೌಂಡ್ ಬಾಕ್ಸನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಖಾಸಗಿ ರೆಸಾರ್ಟ್ ಮಾಲೀಕನ ಮೇಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅದ್ದೂರಿ ಸ್ವಾಗತ:
ನಗರ ಸೇರಿದಂತೆ ಕರ್ನಾಟಕದಾದ್ಯಂತ ಹೊಸ ವರ್ಷ ೨೦೨೬ನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಪ್ರತಿಯೊಂದು ಜಿಲ್ಲೆಯಲ್ಲಿ ಸಂಭ್ರಮಾಚರಣೆ ಜೋರಾಗಿತ್ತು ಹಲವೆಡೆ ಜೋರಾದ ಶಬ್ದ ಹಾಕಿಕೊಂಡು ಯುವ ಸಮೂಹ ಕುಣಿದು ಕುಪ್ಪಳಿಸಿದೆ.
ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲದಲ್ಲಿ ಸಂಭ್ರಮಾಚರಣೆ ನಡೆದಿದ್ದು, ಯುವಜನತೆ ಕೇಕ್ ಕತ್ತರಿಸಿ ಹೊಸ ವರ್ಷವನ್ನು ಸ್ವಾಗತಿಸಿದರು.
ಹೊಸ ವರ್ಷಾಚರಣೆ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಂಗಳೂರು ಪೊಲೀಸರು ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದರು. ನಗರದಾದ್ಯಂತ ೨೦ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.