
ಬೀದರ್:ಡಿ.8:ಔರಾದ್ ಶಾಸಕ ಪ್ರಭು ಚವಾಣ್ ಅವರು ಸರ್ಕಾರಿ ಜಮೀನು ಕಬಳಿಸಿದ್ದಾರೆ ಎನ್ನಲಾದ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.
ಔರಾದ್‍ನ ಮುಖಂಡ ದೀಪಕ್ ಪಾಟೀಲ ಚಾಂದೋರಿ ಹೂಡಿರುವ ದಾವೆಯ ಹಿನ್ನೆಲೆಯಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು, ಬೀದರ್ ತಾಲ್ಲೂಕಿನ ಕೊಳಾರ(ಬಿ) ಗ್ರಾಮದ ಸರ್ವೇ ಸಂಖ್ಯೆ 102// ಹುಲ್ಲುಗಾವಲು ಅಥವಾ ‘ಬಿ’ ಖರಾಬ್ ಜಮೀನು ಎಂಬ ಆರೋಪಗಳ ಬಗ್ಗೆ ವರದಿ ಸಲ್ಲಿಕೆಗೆ ಡಿ. 1 ರಂದು ಬೀದರ್ ಜಿಲ್ಲಾಧಿಕಾರಿಗೆ ಮರು ನಿರ್ದೇಶನ ನೀಡಿದೆ.
ಸರ್ವೇ ಸಂಖ್ಯೆ 102 ಹುಲ್ಲುಗಾವಲು ಅಥವಾ ಸುಳ್ಳೇ ಎನ್ನುವುದನ್ನು ಬಹಿರಂಗ ಪಡಿಸಬೇಕು. ಈ ಕುರಿತು ಗ್ರಾಮ ನಕ್ಷೆಯ ನೈಜತೆ ಸ್ಪಷ್ಟಪಡಿಸಬೇಕು. ಬೀದರ್ ತಹಶೀಲ್ದಾರರು ಉಪ ವಿಭಾಗಾಧಿಕಾರಿಗೆ ಬರೆದ ಪತ್ರ, ಎಡಿಎ???ಆರ್ ಹಾಗೂ ಎಡಿಎ???ಆರ್ ತಹಶೀಲ್ದಾರರೊಂದಿಗಿನ ಪತ್ರ ವ್ಯವಹಾರ ನಿಜವಾದವೇ ಅಥವಾ ರಚಿಸಲಾದ ದಾಖಲೆಗಳೇ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ತಿಳಿಸಿದೆ.
ಪ್ರತಿವಾದಿ ಪ್ರಭು ಅವರು ಆಸ್ತಿ ಖರೀದಿಸಿದ್ದಾರೆಯೇ, ಮಾರಾಟ ಪತ್ರ ನೋಂದಾಯಿಸಿದ್ದಾರೆಯೇ ಎನ್ನುವುದರ ಕುರಿತು ವಿವರವಾದ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ.
ಸರ್ಕಾರಿ ಆಸ್ತಿ ಉಳಿಸಲು ಹೋರಾಟ: ಔರಾದ್ ಶಾಸಕರು 3 ಎಕರೆ ಸರ್ಕಾರಿ ಜಮೀನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಸರ್ಕಾರಿ ಆಸ್ತಿ ಉಳಿಸಲು ಹೋರಾಟ ನಡೆಸುತ್ತಿದ್ದೇನೆ. ನನ್ನ ದಾವೆಯ ಹಿನ್ನೆಲೆಯಲ್ಲಿ ನ್ಯಾಯಾಲಯ ವರದಿಗೆ ಜಿಲ್ಲಾಧಿಕಾರಿಗೆ ಮರು ಸೂಚನೆ ನೀಡಿದೆ. ಜಮೀನು ಸರ್ಕಾರಕ್ಕೆ ಹಸ್ತಾಂತರ ಆಗುವವರೆಗೂ ನನ್ನ ಹೋರಾಟ ಮುಂದುವರಿಯಲಿದೆ ಎಂದು ದೀಪಕ್ ಪಾಟೀಲ ಚಾಂದೋರಿ ತಿಳಿಸಿದ್ದಾರೆ.
ಎಚ್.ಆರ್. ಮಹಾದೇವ ಅವರು ಜಿಲ್ಲಾಧಿಕಾರಿ ಆಗಿದ್ದಾಗ ಸರ್ವೇ ಸಂಖ್ಯೆ 102 ರಲ್ಲಿರುವ ಜಮೀನು ಸರ್ಕಾರಕ್ಕೆ ಸೇರಿದ್ದು ಎಂದು ಆದೇಶ ಹೊರಡಿಸಿದ್ದರು. ಸರ್ಕಾರಿ ಜಮೀನು ಪಹಣಿಯಲ್ಲಿ ಖಾಸಗಿ ವ್ಯಕ್ತಿ ಹೆಸರಲ್ಲಿ ಹೇಗೆ ಬಂದಿತು, ಹೇಗೆ ಮಾರಾಟವಾಯಿತು ಎಂಬ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ರಾಜಕೀಯ ಪ್ರಭಾವದ ಕಾರಣದಿಂದಾಗಿ ಈ ಕುರಿತು ತನಿಖೆ ಮುಂದುವರಿಯಲಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ತಾವು ವರ್ಷದ ಹಿಂದೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ ನಂತರ ಅವರು ಮತ್ತೆ ತನಿಖೆಗೆ ಆದೇಶಿಸಿದ್ದರು. ತನಿಖೆ ನಡೆಸಿದ ಬೀದರ್ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಜಮೀನು ಸರ್ಕಾರಕ್ಕೆ ಸೇರಿದ್ದು ಎಂದು ವರದಿ ಸಲ್ಲಿಸಿದ್ದರು. ಬಳಿಕ ತಾವು ನ್ಯಾಯಾಲಯದ ಮೋರೆ ಹೋದ ನಂತರ ನ್ಯಾಯಾಲಯ ಪ್ರಕರಣದ ಸಂಬಂಧ ವರದಿ ಸಲ್ಲಿಸದ ಕಾರಣಕ್ಕೆ ಬೀದರ್ ಜಿಲ್ಲಾಧಿಕಾರಿಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಮೂಲಕ ರೂ. 1 ಲಕ್ಷ ಭದ್ರತೆಯ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಲು ಆದೇಶ ಹೊರಡಿಸಿತು ಎಂದು ತಿಳಿಸಿದ್ದಾರೆ.
ಅದಾದ ಬಳಿಕ ಹಿಂದಿನ ಬೀದರ್ ತಹಶೀಲ್ದಾರ್ ಡಿ.ಜಿ. ಮಹಾತ್ ಅವರು ರಾಜಕೀಯ ಪ್ರಭಾವ ಹಾಗೂ ಹಣದ ವ್ಯವಹಾರಕ್ಕೆ ಒಳಗಾಗಿ ಜಮೀನು ಖಾಸಗಿ ವ್ಯಕ್ತಿಗೇ ಸೇರಿದ್ದಾಗಿದೆ ಎಂದು ವರದಿ ನೀಡಿದ್ದರು. ಈ ಕಾರಣ ನ್ಯಾಯಾಲಯ ಸ್ಪಷ್ಟ ವರದಿಗೆ ಜಿಲ್ಲಾಧಿಕಾರಿಗೆ ಮರು ನಿರ್ದೇಶನ ಕೊಟ್ಟಿದೆ ಎಂದು ಹೇಳಿದ್ದಾರೆ.
ಸರ್ವೇ ಸಂಖ್ಯೆ 102 ಆಕಾರ ಬಂದ್ ಪ್ರಕಾರ ಡಿ ಖರಾಬ್ ಜಮೀನು ಎಂದಿದೆ. ಗ್ರಾಮ ನಕ್ಷೆಯಲ್ಲಿ ಹುಲ್ಲುಗಾವಲು ಎಂದು ಉಲ್ಲೇಖಿಸಲಾಗಿದೆ. 1954 ರಿಂದ ಮಾಡಲಾದ ಜಮಾ ಬಂದಿ ಪ್ರಕಾರ ಜಮೀನು ಸರ್ಕಾರಕ್ಕೆ ಸೇರಿದ್ದಾಗಿದೆ. ಇಷ್ಟೆಲ್ಲ ಇದ್ದ ನಂತರವೂ ಜಮೀನು ಅತಿಕ್ರಮಣವಾಗಿರುವುದು ಕಳವಳಕಾರಿ ಎಂದು ತಿಳಿಸಿದ್ದಾರೆ.
ಪ್ರಕರಣದಲ್ಲಿ ಅಧಿಕಾರಿಗಳು ನಡೆದುಕೊಂಡ ರೀತಿ ರಾಜಕೀಯ ಅಧಿಕಾರ ಹಾಗೂ ಹಣವಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದ್ದಕ್ಕೆ ನಿದರ್ಶನವಾಗಿದೆ. ಸರ್ಕಾರಿ ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ಮಾರಾಟ ಮಾಡಿದವರು, ಖರೀದಿಸಿದವರು ಹಾಗೂ ಇದರಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿಷಯದ ಕುರಿತು ಕರ್ನಾಟಕ ಲೋಕಾಯುಕ್ತದ ಮೊರೆ ಸಹ ಹೋಗಲಾಗುವುದು ಎಂದು ಎಚ್ಚರಿಸಿದ್ದಾರೆ.

























