Home ಜಿಲ್ಲೆ ಕಲಬುರಗಿ ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಹೊಸ ಕೈಗಾರಿಕಾ ವಸಾಹತು: 200 ಕೋಟಿ ರೂ ಯೋಜನೆಗೆ ಸಚಿವ ಸಂಪುಟ...

ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಹೊಸ ಕೈಗಾರಿಕಾ ವಸಾಹತು: 200 ಕೋಟಿ ರೂ ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದನೆ: ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್

ಕಲಬುರಗಿ: ಮೇ.10:ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‍ಡಿಬಿ) ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (ಕೆಎಸ್‍ಎಸ್‍ಐಡಿಸಿ) ಸಹಯೋಗದಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ವೇಗ ನೀಡಲು ಬೃಹತ್ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಎರಡು ಜಿಲ್ಲೆಗಳಲ್ಲಿ ಒಟ್ಟು 210. 58 ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ವಸಾಹತುಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಒಟ್ಟು 200.07 ಕೋಟಿ ರೂ. ಗಳ ವೆಚ್ಚದ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದ್ದು ಸಚಿವ ಸಂಪುಟ ಸಭೆ ಅನುಮೋದಿಸಿದೆ ಎಂದು ಕೆಕೆಆರ್‍ಡಿಬಿ ಅದ್ಯಕ್ಷ ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ಯೋಜನೆಯ ಪ್ರಮುಖ ಅಂಶಗಳು:

ಕಲಬುರಗಿ ಜಿಲ್ಲೆಯ ನಂದೂರು-ಕೆ ಬಳಿ ಸುಮಾರು 62.58 ಎಕರೆ ವಿಸ್ತೀರ್ಣದಲ್ಲಿ ಹೊಸ ಕೈಗಾರಿಕಾ ವಸಾಹತು ನಿರ್ಮಾಣವಾಗಲಿದೆ. ಇದರ ಒಟ್ಟು ಅಭಿವೃದ್ಧಿ ವೆಚ್ಚ 61.26 ಕೋಟಿ ರೂ. ಗಳಾಗಿದ್ದು, ಇದರಲ್ಲಿ ಕೆ.ಕೆ.ಆರ್.ಡಿ.ಬಿ ಮತ್ತು ಕೆ.ಎಸ್.ಎಸ್.ಐ.ಡಿ.ಸಿ ತಲಾ ಶೇ. 50 ರಷ್ಟು ಅನುದಾನವನ್ನು ಹಂಚಿಕೊಳ್ಳಲಿವೆ.

ಯಾದಗಿರಿ ಜಿಲ್ಲೆಯಲ್ಲಿ ಎರಡು ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ:

  1. ಯಾದಗಿರಿ ತಾಲ್ಲೂಕು: ಇಲ್ಲಿ 100 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಸಾಹತು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದಕ್ಕೆ 96.25 ಕೋಟಿ ರೂ, ವೆಚ್ಚವಾಗಲಿದೆ.
  2. ಶಹಾಪುರ ತಾಲ್ಲೂಕು: ಶಹಾಪುರ ತಾಲ್ಲೂಕಿನ ಹಳಿಸಾಗರ ಗ್ರಾಮದ ಬಳಿ 48 ಎಕರೆ ಪ್ರದೇಶದಲ್ಲಿ 42.56 ಕೋಟಿ ರೂ. ವೆಚ್ಚದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೊಳ್ಳಲಿದೆ.

ಈ ಯೋಜನೆಗಳಿಗೆ ಬೇಕಾಗುವ ಅಭಿವೃದ್ಧಿ ವೆಚ್ಚದಲ್ಲಿ 100 ಕೋಟಿ ರೂ.ಗಳನ್ನು ಕೆ.ಕೆ.ಆರ್.ಡಿ.ಬಿ ಭರಿಸಲಿದ್ದು, ಉಳಿದ 100.07 ಕೋಟಿ ರೂ, ಗಳನ್ನು ಕೆ.ಎಸ್.ಎಸ್.ಐ.ಡಿ.ಸಿ ಭರಿಸಲಿದೆ. 2025-26ನೇ ಸಾಲಿನ ಅಭಿವೃದ್ಧಿ ಕೆಲಸಗಳಿಗಾಗಿ ಈ ಅನುದಾನ ಮೀಸಲಿಡಲಾಗಿದೆ ಎಂದೂ ಡಾ. ಅಜಯ್ ಸಿಂಗ್ ವಿವರಿಸಿದ್ದಾರೆ.

ಮೀಸಲಾತಿ ಮತ್ತು ನಿಯಮಗಳು:

ಕೈಗಾರಿಕಾ ನಿವೇಶನಗಳ ಹಂಚಿಕೆಯಲ್ಲಿ ಸರ್ಕಾರದ ನಿಯಮದಂತೆ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಪ್ರತ್ಯೇಕವಾಗಿ ಭೂಮಿ ಮತ್ತು ಅನುದಾನವನ್ನು ಹಂಚಿಕೆ ಮಾಡಲಾಗಿದೆ. ನಿವೇಶನಗಳ ಹಂಚಿಕೆಯ ಸಂದರ್ಭದಲ್ಲಿ ಸರ್ಕಾರದ ಆದೇಶ ಸಂಖ್ಯೆ (ಸಿಐ 76, 2019 ದಿನಾಂಕ 22-11-2023) ರನ್ವಯ ಪಾರದರ್ಶಕ ನಿಯಮಗಳನ್ನು ಪಾಲಿಸಲಾಗುವುದು.

ಈ ಯೋಜನೆಯಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿದ್ದು, ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ನಿರೀಕ್ಷಿಸಲಾಗಿದೆ.

ಕಲಬುರಗಿ- ಯಾದಗಿರಿ ಜಿಲ್ಲೆಗಳಲ್ಲಿ ಕೈಗಾರಿಕೆ ಅಭಿವೃದ್ಧಿಗೆ ವೇಗ: ಸಚಿವ ದರ್ಶನಾಪುರ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಭಿವೃದ್ಧಿ ಮಂಡಳಿ ಸಂಯುಕ್ತವಾಗಿ ಶೇ.50ರ ಅನುಪಾತದಲ್ಲಿ ವೆಚ್ಚವನ್ನು ಭರಿಸಿ ಸ್ಥಾಪನೆಯಾಗಲಿರುವ 200 ಕೋಟಿ ರು ವೆಚ್ಚದ ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿನ ಹೊಸ ಕೈಗಾರಿಕಾ ವಸಾಹತು ಯೋಜನೆಯಿಂದ ಈ ಬಾಗದಲ್ಲಿ ಬರುವ ದಿನಗಳಲ್ಲಿ ಕೈಗಾರಿಕೆಗಳ ಪ್ರಗತಿಯಾಗಲಿದೆ ಎಂದು ಸಣ್ಣ ಕೈಗಾರಿಕೆ ಖಾತೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.

ಸದರಿ ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಕಲಬುರಗಿ, ಯಾದಗಿರಿ, ಶಹಾಪೂರ
ಈ ಪ್ರದೇಶವು ಹಿಂದುಳಿದ ಪ್ರದೇಶವಾಗಿದ್ದು, ಉದ್ದೇಶಿತ ಕೈಗಾರಿಕಾ ವಸಾಹತು ಸ್ಥಾಪನೆಯಿಂದ ಈ ಭಾಗದ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಲಭಿಸಲಿದೆ, ಈ ಮೂಲಕ ಉದ್ಯಮಗಳ ಪ್ರಗತಿಯಾಗಲಿದೆ. ಈ ಬಾಗ ಕೈಗಾರಿಕೆಯಲ್ಲಿ ಸಬಲೀಕರಣಗೊಳ್ಳಲು ಈ ಯೋಜನೆ ಸಹಾಯವಾಗಲಿದೆ ಎಂದೂ ಸಚಿವ ಶರಣಬಸಪ್ಪ ದರ್ಶನಾಪುರ ವಿಶ್ವಾಸ ವ್ಯಕ್ತಪಪಡಿಸಿದ್ದಾರೆ.