ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿಯವರ ಕೊಡುಗೆ ಅಪಾರ

ಕಲಬುರಗಿ : ಡಿ.30:ಸುಭಾಷ್ ಚಂದ್ರ ಬೋಸರು ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಪ್ರಮುಖ ನಾಯಕರಾಗಿದ್ದರು ಮತ್ತು ನಂತರ ಫಾರ್ವರ್ಡ್ ಬ್ಲಾಕ್ ಎಂಬ ತಮ್ಮದೇ ಆದ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ಬ್ರಿಟಿಷ್ ಆಳ್ವಿಕೆಯಿಂದ ಭಾರತವನ್ನು ಸ್ವತಂತ್ರಗೊಳಿಸಲು ಸಶಸ್ತ್ರ ಹೋರಾಟದ ಅಗತ್ಯವಿದೆ ಎಂದು ಬೋಸರು ನಂಬಿದ್ದರು ಮತ್ತು ಅದಕ್ಕಾಗಿ ಅವರು ಜರ್ಮನಿ ಮತ್ತು ಜಪಾನ್‍ನಂತಹ ದೇಶಗಳ ಸಹಾಯವನ್ನು ಕೋರಿದರು. ಅವರು ಭಾರತೀಯ ರಾಷ್ಟ್ರೀಯ ಸೇನೆಯನ್ನು ರಚಿಸಿದರು ಮತ್ತು ಅದರ ಮೂಲಕ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು. ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿನ ‘ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ‘ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೆÇೀರ್ಟ್ ಬ್ಲೇರ್’ನಲ್ಲಿ ‘ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ತ್ರಿವರ್ಣ ಧ್ವಜವನ್ನು ಹಾರಿಸಿದ ದಿನಾಚರಣೆ’ಯ ಪ್ರಯುಕ್ತ ನೇತಾಜಿಯವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ನೇತಾಜಿಯವರು ಕಾಂಗ್ರೆಸ್ ನಾಯಕತ್ವ, ಫಾರ್ವರ್ಡ್ ಬ್ಲಾಕ್ ಸ್ಥಾಪನೆ, ಸಶಸ್ತ್ರ ಹೋರಾಟ, ಭಾರತೀಯ ರಾಷ್ಟ್ರೀಯ ಸೇನೆಯ ಸ್ಥಾಪನೆ, ಧೈರ್ಯ ಮತ್ತು ತ್ಯಾಗಗಳ ಮೂಲಕ ಅವರು ತಮ್ಮ ಜೀವನದುದ್ದಕ್ಕೂ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಮತ್ತು ತಮ್ಮ ಗುರಿಯನ್ನು ಸಾಧಿಸಲು ಅನೇಕ ತ್ಯಾಗಗಳನ್ನು ಮಾಡಿದರು ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಶಿವಕುಮಾರ ಮುತ್ತಾ, ಶಿಕ್ಷಕರಾದ ಗುರುಲಿಂಗಯ್ಯ, ಆದರ್ಶ, ವಿಶ್ವನಾಥ, ಗೌರಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.