ಮಾಹಿತಿ ನೀಡಲು ನಿರ್ಲಕ್ಷ್ಯ:ಮೂರು ಪ್ರಕರಣಗಳಲ್ಲಿ 65 ಸಾವಿರ ರೂ. ದಂಡ ವಿಧಿಸಿ ಆದೇಶ:ಬಿ. ವೆಂಕಟ ಸಿಂಗ್

ಕಲಬುರಗಿ:ಫೆ.1: ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ತಿಳಿಸಿದರೂ ಆಯೋಗದ ನಿರ್ದೇಶನವನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸಿದ ಮೂರು ಪ್ರಕರಣಗಳ ಪೈಕಿ ಎರಡು ಪ್ರಕರಣದಲ್ಲಿ ತಲಾ 25,000 ರೂ. ಮತ್ತು ಒಂದು ಪ್ರಕರಣದಲ್ಲಿ 15,000 ರೂ. ಸೇರಿದಂತೆ ಒಟ್ಟು ಮೂರು ಪ್ರಕರಣಗಳಲ್ಲಿ 65 ಸಾವಿರ ರೂ. ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ದಂಡ ವಿಧಿಸಿ ಆದೇಶಿಸಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟ್ ಸಿಂಗ್ ತಿಳಿಸಿದ್ದಾರೆ.
ಶನಿವಾರ ಈ ಕುರಿತು ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗುರುಮೂರ್ತಿ ಎನ್ನುವವರು 2022ರ ನವೆಂಬರ್ 11 ರಂದು ಮತ್ತು ಜಲಾಲ್ ಎನ್ನುವವರು 2023ರ ಅಕ್ಟೋಬರ್ 25 ರಂದು ಇಬ್ಬರು ಅರ್ಜಿದಾರರು 15ನೇ ಹಣಕಾಸು ಆಯೋಗದ ಅನುದಾನ ಕುರಿತು ಪ್ರತ್ಯೇಕವಾಗಿ ಮಾಹಿತಿ ಕೋರಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸುಂಕೇಶ್ವರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗೆ ಅರ್ಜಿ ಸಲ್ಲಿಸಿದರು. ಪಿ.ಐ.ಓ ದಿಂದ ಮಾಹಿತಿ ಸಿಗದ ಅರ್ಜಿದಾರರು ಸೆಕ್ಷನ್ 19(3)ರಲ್ಲಿ ಆಯೋಗಕ್ಕೆ ಪ್ರತ್ಯೇಕವಾಗಿ ದೂರು ಸಲ್ಲಿಸಿದರು. ಆಯೋಗವು ವಾದಿ ಪ್ರತಿವಾದಿ ವಿಚಾರಣೆ ನಡೆಸಿ ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿ ಪಿ.ಡಿ.ಓಗೆ ಆದೇಶಿಸಿದ್ದರೂ ಆಯೋಗದ ನಿರ್ದೇಶನ ಪಾಲನೆ ಮಾಡದ ಪಿ.ಡಿ.ಓ ನಾಗಭೂಷಣ ಅವರಿಗೆ ಎರಡು ಪ್ರಕರಣದಲ್ಲಿ ತಲಾ 25 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದರು.
ಅದೇ ರೀತಿ ಇನ್ನೊಂದು ಪ್ರಕರಣದಲ್ಲಿ ರವಿ ಮದನಕರ್ ಎನ್ನುವರು ಸಹ 15ನೇ ಹಣಕಾಸು ಆಯೋಗದ ಅನುದಾನಕ್ಕೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಅಡಕಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗೆ 2023ರ ಆಗಸ್ಟ್ 7 ರಂದು ಮಾಹಿತಿ ಬಯಸಿ ಅರ್ಜಿ ಸಲ್ಲಿಸಿದರು. ಸಾರ್ವಜನಿಕ ಮಾಹಿತಿ ಅಧಿಕಾರಿಗಳೀಂದ ಮಾಹಿತಿ ದೊರೆಯದಿದ್ದಾಗ ಅರ್ಜಿದಾರರು ಆಯೋಗದ ಕದ ತಟ್ಟಿದರು. ವಿಚಾರಣೆಯಲ್ಲಿ ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಆಯೋಗವು ಪಿ.ಐ.ಓ ಅವರಿಗೆ ದಿ.15-09-2025 ಎಚ್ಚರಿಕೆಯ ಆದೇಶ ನೀಡಿತ್ತು. ಇμÁ್ಟಗಿಯೂ ಮಾಹಿತಿ ನೀಡಿದಿರುವುದಕ್ಕೆ ಮತ್ತು ಇತ್ತೀಚೆಗೆ ಜನವರಿ 23ರ ವಿಚಾರಣೆಗೂ ಗೈರಾದ ಪಿ.ಡಿ.ಓ. ಭಗವಂತರಾಯ ಅವರಿಗೆ 15,000 ಸಾವಿರ ದಂಡ ವಿಧಿಸಲಾಗಿದೆ ಎಂದು ವೆಂಕಟ್ ಸಿಂಗ್ ಅವರು ದಂಡ ಪ್ರಕರಣಗಳ ಕುರಿತು ಮಾಹಿತಿ ನೀಡಿದರು.
ಮಾಹಿತಿ ಹಕ್ಕು ಕಾಯ್ದೆ 2005ರಲ್ಲಿ ಜಾರಿಗೆ ಬಂದರೂ ಇನ್ನು ಬಹುತೇಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಕಾಯ್ದೆ ತಿಳುವಳಿಕೆ ಬಗ್ಗೆ ಕೊರತೆ ಇದ್ದು, ಈ ನಿಟ್ಟಿನಲ್ಲಿ ಈಗಾಗಲೆ ಬೀದರ, ಬಳ್ಳಾರಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಕುರಿತು ಕಾರ್ಯಗಾರ ನಡೆಸಲಾಗಿದೆ. ಮುಂದೆ ಫೆಬ್ರವರಿ-21ಕ್ಕೆ ಕೊಪ್ಪಳದಲ್ಲಿ ಆಯೋಜಿಸಲಾಗಿದೆ. ಹಂತ ಹಂತವಾಗಿ ಆಯೋಗದ ವ್ಯಾಪ್ತಿಗೆ ಬರುವ ಏಳು ಜಿಲ್ಲೆಗಳ ಅಧಿಕಾರಿಗಳಿಗೆ ಕಾಯ್ದೆ ಕುರಿತು ತಿಳಿವಳಿಕೆ ಮೂಡಿಸುವ ಮೂಲಕ ಸಾರ್ವಜನಿಕರಿಗೆ ಕಾಯ್ದೆಯನ್ವಯ ಸಕಾಲದಲ್ಲಿ ಮಾಹಿತಿ ದೊರೆಯಲು ಆಯೋಗ ಕೆಲಸ ಮಾಡಲಿದೆ. ಇನ್ನು ಇದೂವರೆಗೆ ದ್ವಿತೀಯ ಮೇಲ್ಮನವಿ ಅರ್ಜಿಯನ್ನು ಬೆಂಗಳೂರಿನ ಆಯೋಗದ ಕೇಂದ್ರ ಕಚೇರಿಯಲ್ಲಿ ಸಲ್ಲಿಸಬೇಕಾಗಿತ್ತು. ಆದರೆ ಇದೇ ಫೆಬ್ರವರಿ 1 ರಿಂದ 19(3) ರಡಿ ಮೇಲ್ಮನವಿ ಅರ್ಜಿಗಳನ್ನು ನೇರವಾಗಿ ಕಲಬುರಗಿ ಪೀಠದಲ್ಲಿಯೇ ಪಡೆದು ಪರಿಶೀಲನೆ ಮಾಡಿ ವಿಚಾರಣೆ ಮಾಡಲಾಗುತ್ತಿದೆ ಎಂದು ಆಯುಕ್ತ ಬಿ. ವೆಂಕಟ ಸಿಂಗ್ ಸ್ಪಷ್ಟಪಡಿಸಿದರು.
3 ತಿಂಗಳಲ್ಲಿ 400 ಪ್ರಕರಣ ವಿಲೇವಾರಿ: ತಾವು ಕಲಬುರಗಿ ಪೀಠದ ಆಯುಕ್ತರಾಗಿ 2025ರ ಅಕ್ಟೋಬರ್ 21 ರಂದು ಅಧಿಕಾರ ವಹಿಸಿಕೊಂಡ ನಂತರ ನವೆಂಬರ್ 24 ರಿಂದ ವಿಚಾರಣೆ ಪ್ರಕ್ರಿಯ ಆರಂಭಿಸಿದ್ದೇನೆ. ಇದೂವರೆಗೆ 992 ಪ್ರಕರಣಗಳನ್ನು ವಿಚಾರಣೆ ಮಾಡಿ 400 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಇದರಲ್ಲಿ 2010 ರಿಂದ 2022ರ ವರೆಗೆ ಬಾಕಿ ಇದ್ದ 357 ಪ್ರಕರಣಗಳಲ್ಲಿ 282 ವಿಲೇವಾರಿ ಮಾಡಿರುವುದು ವಿಶೇಷ. ಇನ್ನು ಹಿಂದಿನ ಆಯುಕ್ತರು ವಿಚಾರಣೆ ನಡೆಸಿದ 882 ಪ್ರಕರಣಗಳು ತಮ್ಮ ಮುಂದಿದ್ದು, ಬರುವ ಮಾರ್ಚ್ ಅಂತ್ಯದೊಳಗೆ ಇವೆಲ್ಲವನ್ನು ವಿಲೇವಾರಿ ಮಾಡಲಾಗುವುದು ಎಂದ ವೆಂಟಕ್ ಸಿಂಗ್ ಅವರು, ಪ್ರಸ್ತುತ ಒಟ್ಟಾರೆಯಾಗಿ ಕಲಬುರಗಿ ಪೀಠದಲ್ಲಿ 6,691 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದು ಮಾಹಿತಿ ನೀಡಿದರು.
25 ಸಾವಿರ ರೂ. ದಂಡ ವಸೂಲಿ: ಮಾಹಿತಿ ಹಕ್ಕು ಕಾಯ್ದೆ-2005ರಡಿ ಅರ್ಜಿದಾರರಿಗೆ ಮಾಹಿತಿ ನೀಡಲು ವಿಫಲರಾದವರಿಗೆ ಆಯೋಗವು ಕೇವಲ ದಂಡ ವಿಧಿಸುವುದμÉ್ಟ ಅಲ್ಲ ದಂಡ ವಸೂಲಿಗೂ ಮುಂದಾಗಿದೆ. ದಂಡ ವಿಧಿಸಿದ ಪ್ರಕರಣದಲ್ಲಿ ಇದೂವರೆಗೆ ಹಣ ಪಾವತಿಸದ ಹಿಂದೆ ಕೊಪ್ಪಳ್ಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿದ್ದ ಮತ್ತು ಪ್ರಸ್ತುತ ಬಾಗಲಕೋಟೆ ಡಿ.ಎಚ್.ಓ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ರಾಜಕುಮಾರ ಯರಗಲ್ ಅವರಿಂದ 10 ಸಾವಿರ ರೂ. ಮತ್ತು ರಾಯಚೂರು ಜಿಲ್ಲೆಯ ಯರಮರಸ್ ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಮಲ್ಲಿಕಾರ್ಜುನ ಅವರಿಂದ 15 ಸಾವಿರ ರೂ. ದಂಡ ವಸೂಲಿ ಸಹ ಮಾಡಲಾಗಿದೆ ಎಂದು ವೆಂಕಟ್ ಸಿಂಗ್ ತಿಳಿಸಿದರು.