
ಬೀದರ್:ಫೆ.10: ಔರಾದ್ ತಾಲ್ಲೂಕಿನ ಕೌಠಾ(ಬಿ) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಬರೆದ ಮನವಿ ಪತ್ರವನ್ನು ಉಪ ಕಾರ್ಯದರ್ಶಿಗೆ ಸಲ್ಲಿಸಿದರು.
ಪಿಡಿಒ ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗುತ್ತಿಲ್ಲ. ಸಾರ್ವಜನಿಕರ ಕುಂದು ಕೊರತೆ ಆಲಿಸುತ್ತಿಲ್ಲ. ಸಮಸ್ಯೆ ಬಗೆಹರಿಸುತ್ತಿಲ್ಲ. ಮನ ಬಂದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ದೂರಿದರು.
ಈ ಕುರಿತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಕೂಡಲೇ ಪಿಡಿಒ ವರ್ಗಾವಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮಿತಿಯ ಜಿಲ್ಲಾ ಅಧ್ಯಕ್ಷ ಸತೀಶ್ ವಗ್ಗೆ, ಉಪಾಧ್ಯಕ್ಷ ಶಿವು ಮನ್ನಾಎಖ್ಖೆಳ್ಳಿ, ಗಣಪತಿ ವಾಸುದೇವ ಶೆಂಬೆಳ್ಳಿ, ಹಿರಿಯ ದಲಿತ ಮುಖಂಡ ಉದಯ ನಾಯಕ್, ಸಂಗಮೇಶ ಭಾವಿದೊಡ್ಡಿ, ಮಹೇಶ, ಬಸವರಾಜ ಲಾಧಾ, ವಿಶಾಲ್ ದೊಡ್ಡಿ ಇದ್ದರು.
























