ಆಳಂದ:ಅ.೧೮: ಜನರ ದಿನನಿತ್ಯದ ಸಮಸ್ಯೆಗಳನ್ನು ಆಳುವವರು ಗಮನಿಸುತ್ತಿಲ್ಲ ಎಂಬ ಆಕ್ರೋಶ ಪಟ್ಟಣದ ಪ್ರಜೆಗಳಲ್ಲಿದೆ. ಸಂಘಟನೆಗಳು, ಪ್ರತಿಪಕ್ಷಗಳು, ಹಾಗೂ ಸಾಮಾಜಿಕ ಹೋರಾಟಗಾರರು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ವಿಫಲವಾಗಿದ್ದು, ಸಾರ್ವಜನಿಕರು ನರಕಾಯ ಜೀವನ ಕಳೆಯುವಂತಾಗಿದೆ.
ರಸ್ತೆಯ ದುಸ್ಥಿತಿ, ಧೂಳಿನ ಕಾಟ:
ದರ್ಗಾ ಚೌಕದಿಂದ ಸಿದ್ಧಾರ್ಥ ಚೌಕ್ ವರೆಗೆ ಸುಮಾರು ಎರಡು ಕಿಲೋಮೀಟರ್ ಉದ್ದದ ಮುಖ್ಯ ರಸ್ತೆಯು ತೀರಾ ಹದಗೆಟ್ಟು ಧೂಳಿನಿಂದ ಕಂಗಾಲಾಗಿದೆ. ವಾಹನ ಸಂಚಾರ ತೆಗ್ಗು, ದೊಡ್ಡ ದೊಡ್ಡ ಗುಂಡಿಗಳು, ಮತ್ತು ನಿರಂತರ ಜಾಮಿನಿಂದ ಜನರ ಸಂಚಾರವೇ ಸಂಕಷ್ಟವಾಗಿದೆ. “ಈ ರಸ್ತೆ ಸರ್ಕಸ್ ಮಾಡಿದಂತಾಗಿದೆ” ಎಂದು ನಾಗರಿಕರು ವ್ಯಂಗ್ಯವಾಗಿ ಹೇಳುತ್ತಿದ್ದಾರೆ.
ಸಾರ್ವಜನಿಕ ಗ್ರಂಥಾಲಯ ಉದ್ಘಾಟನೆ ಬಾಕಿ:
ಪಟ್ಟಣದ ಹೃದಯಭಾಗದಲ್ಲಿ ನಿರ್ಮಿಸಿದ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಪೂರ್ಣಗೊಂಡು ಎರಡೂವರೆ ವರ್ಷ ಕಳೆದರೂ ಇನ್ನೂ ಉದ್ಘಾಟನೆ ಆಗಿಲ್ಲ. ಹಳೆಯ ಉಪಕಚೇರಿ ಕಟ್ಟಡದಲ್ಲಿ ನಾಮಮಾತ್ರದ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕ ಹಾಗೂ ವ್ಯವಸ್ಥೆ ಲಭ್ಯವಿಲ್ಲ. ಆಡಳಿತದ ನಿರ್ಲಕ್ಷ್ಯದಿಂದ ಜ್ಞಾನಕೇಂದ್ರವೂ ಬಾಗಿಲು ತೆರೆದಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ.
ಸಂಚಾರ ಅರಾಜಕತೆ ಮತ್ತು ಅಸಮರ್ಪಕ ನಿಯಂತ್ರಣ:
ಶ್ರೀರಾಮ ಮಾರುಕಟ್ಟೆ ಹಾಗೂ ಬಸ್ ನಿಲ್ದಾಣ ಪ್ರದೇಶದಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೀದಿ ವ್ಯಾಪಾರಿಗಳು, ತಳ್ಳುಗಾಡಿಗಳು, ಮತ್ತು ಅಕ್ರಮ ಪಾರ್ಕಿಂಗ್‌ನಿAದ ರಸ್ತೆ ತುಂಬಿ ಹೋಗಿದ್ದು, ಪಾದಚಾರಿಗಳು ಸಹ ಸುರಕ್ಷಿತವಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ದ್ವಿಚಕ್ರ ವಾಹನ, ಜೀಪ್, ಕಾರುಗಳು ಎಲ್ಲೆಲ್ಲಿ ಬೇಕಾದರೂ ನಿಲ್ಲಿಸುತ್ತಿರುವುದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಪೊಲೀಸರು ಮತ್ತು ಪುರಸಭೆ ಆಡಳಿತ ಪರಸ್ಪರದ ಮೇಲೆ ಹೊಣೆತಳ್ಳುತ್ತಿದ್ದರೆ, ಸಮಸ್ಯೆಗೆ ಯಾರೂ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿಲ್ಲ. “ನಿತ್ಯ ಸಂಚಾರದ ತೊಂದರೆ, ಧೂಳು, ಧ್ವನಿ ಮಾಲಿನ್ಯ ಇವುಗಳಿಂದ ಜನ ಕಂಗಾಲಾಗಿದ್ದಾರೆ” ಎಂದು ವ್ಯಾಪಾರಿಗಳು ಹೇಳುತ್ತಾರೆ.
ಮಾರುಕಟ್ಟೆ ಅರಾಜಕತೆ, ವ್ಯಾಪಾರಿಗಳ ಏಕಪಕ್ಷೀಯತೆ:
ಶ್ರೀರಾಮ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ನಿಯಮವಿಲ್ಲದೆ ಜಾಗ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿರುವುದು ಕಂಡುಬರುತ್ತಿದೆ. ಕೆಲವರು ತಮ್ಮ ವ್ಯಾಪಾರ ವಸ್ತುಗಳನ್ನು ತುಂಬಾ ಜಾಗದಲ್ಲಿ ಇಟ್ಟು, ಇತರರಿಗೆ ಅವಕಾಶವಿಲ್ಲದಂತೆ ಮಾಡುತ್ತಿದ್ದಾರೆ. ಬೀದಿಬಂಡಿಗಳ ಮೇಲೆ ಆಹಾರ ಮಾರಾಟದಲ್ಲಿ ಸ್ವಚ್ಛತಾ ನಿಯಂತ್ರಣ ಇಲ್ಲ, ಪುರಸಭೆಯು ನಿಯಮ ಪಾಲನೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ.
ಸAತೆ ಸ್ಥಳದ ಕೊರತೆ ಮತ್ತು ಆಡಳಿತದ ಮೌನ:
ಪಟ್ಟಣದ ಸಂತೆ ಪ್ರದೇಶದಲ್ಲಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳಾವಕಾಶ ನೀಡದಿರುವುದರಿಂದ ವ್ಯಾಪಾರಿಗಳಿಗೂ ತೊಂದರೆ, ಸಂಚಾರಕ್ಕೂ ತೊಂದರೆ ಉಂಟಾಗಿದೆ. ಕೆಲವರು ಬಿದಿರಿನಿಂದ ಕಟ್ಟಿದ ಶೆಡ್‌ಗಳಲ್ಲಿ ಕೆಲಸ ನಡೆಸುತ್ತಿದ್ದರೆ, ಕೆಲವರು ನೇರವಾಗಿ ರಸ್ತೆಯ ಮೇಲೆ ವ್ಯಾಪಾರ ಮಾಡಲು ನಿಲ್ಲುತ್ತಿದ್ದಾರೆ.
ಜನರ ಪ್ರಶ್ನೆ: ‘ಸ್ಪಂದನೆ ಯಾವಾಗ?’
ಎಲ್ಲಾ ಸಮಸ್ಯೆಗಳಿಗೆ ಸಂಬAಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೌನ ವಹಿಸಿರುವುದು ನಾಗರಿಕರಲ್ಲಿ ಅಸಮಾಧಾನ ಉಂಟುಮಾಡಿದೆ. “ಜನರ ಸಮಸ್ಯೆ ಗೊತ್ತಿದ್ದರೂ ಕ್ರಮ ಕೈಗೊಳ್ಳುವುದಿಲ್ಲ, ಇಂತಹ ನಿರ್ಲಕ್ಷ್ಯ ಇನ್ನು ಸಹಿಸಲು ಸಾಧ್ಯವಿಲ್ಲ,” ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಕ್ಷಣ ಜನರ ಧ್ವನಿಗೆ ಸ್ಪಂದಿಸಿ ಮೂಲಸೌಕರ್ಯ ಸುಧಾರಣೆ ಕೈಗೊಂಡರೆ ಮಾತ್ರ ಪಟ್ಟಣದ ಜನ ಜೀವನ ಸುಗಮವಾಗಲಿದೆ ಎಂಬ ಅಭಿಪ್ರಾಯ ನಾಗರಿಕರಲ್ಲಿ ವ್ಯಕ್ತವಾಗಿದೆ.























