
ನವದೆಹಲಿ,ಮೇ.೧೫- ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್- ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ ರದ್ದಾಗಿದ್ದ ಪರೀಕ್ಷೆಯ ಮರುಪರೀಕ್ಷೆ ಜೂನ್ ೨೧ರಂದು ನಡೆಯಲಿದೆ ಎಂದು ಹೇಳಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಮುಂದಿನ ವರ್ಷದಿಂದ ಆನ್‌ಲೈನ್ ಮೂಲಕ ನೀಟ್-ಯುಜಿ ಪರೀಕ್ಷೆ ನಡೆಸಲಾಗುವುದು ಎಂದು ಇಂದು ಪ್ರಕಟಿಸಿದ್ದಾರೆ.
ಈ ವರ್ಷದ ನೀಟ್-ಯುಜಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಮರುಪರೀಕ್ಷೆ ೨೦೨೬ಅನ್ನು ಜೂನ್ ೨೧ ರ ನಡೆಸಲು ನಿರ್ಧರಿಸಲಾಗಿದೆ, ಇನ್ನು ಮುಂದೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದನ್ನು ತಡೆಯುವ ಉದ್ದೇಶದಿಂದ ಆನ್‌ಲೈನ್ ಮಾದರಿಯಲ್ಲಿ ಪರೀಕ್ಷೆ ಬರೆಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಸಿಬಿಐ ತನಿಖೆ ನಡೆಯುತ್ತಿದೆ, , ಸೋರಿಕೆಯಾದ ಪ್ರಶ್ನೆ ಪತ್ರಿಕೆ ಪಡೆಯಲು ಪ್ರತಿ ವಿದ್ಯಾರ್ಥಿಗೆ ೩ ಲಕ್ಷದಿಂದ ೫ ಲಕ್ಷ ರೂ.ಗಳವರೆಗೆ ಶುಲ್ಕ ವಿಧಿಸಲಾಗಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ, ಈ ಸಂಬಂಧ ತನಿಖೆಯನ್ನು ಮತ್ತಷ್ಟು ತೀವ್ರಗೊಳಸಲಾಗಿದೆ ಎಂದು ತಿಳಿಸಿದ್ದಾರೆ.
ನೀಟ್-ಯುಜಿ ಪತ್ರಿಕೆಯು ಯಶ್ ಯಾದವ್ ಎಂದು ಗುರುತಿಸಲಾದ ಆರೋಪಿಯ ಮೂಲಕ ರಾಜಸ್ಥಾನವನ್ನು ತಲುಪಿದೆ ಎಂದು ಹೇಳಲಾಗಿದೆ, ಈತ ಇನ್ನೊಬ್ಬ ಆರೋಪಿ ವಿಕಾಸ್ ಬಿವಾಲ್ ಜೊತೆ ಪರಿಚಿತನಾಗಿದ್ದ ಎನ್ನುವುದು ತಿಳಿದು ಬಂದಿದೆ, ಈ ಸಂಬಂಧ ಸಮಗ್ರ ತನಿಖೆ ನಡೆಯಿತ್ತಿದೆ ಎಂದಿದ್ದಾರೆ.
ಪರೀಕ್ಷಾ ಕೇಂದ್ರ ನಿರ್ಧಾರ:
ಜೂನ್ ೨೧ ರಂದು ನೀಟ್-ಯುಜಿ ಮರು ಪರಿಕ್ಷೆ ನಡೆಯಲಿದ್ದು ಅಭ್ಯರ್ಥಿಗಳು ತಮ್ಮದೇ ಆದ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದ ಸಚಿವ ಧಮೇಂದ್ರ ಪ್ರಧಾನ್ ಜೂನ್ ೧೪ ರೊಳಗೆ ಮರು ಪರೀಕ್ಷೆ ಪ್ರವೇಶ ಪತ್ರವನ್ನು ನೀಡಲಾಗುವುದು ಎಂದಿದ್ದಾರೆ.
ಈ ವರ್ಷದ ನೀಟ್ ಮರು ಪರೀಕ್ಷೆಗೆ ಅರ್ಜಿ ಶುಲ್ಕ ಅಗತ್ಯವಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆಯಂತಹ “ದುಷ್ಕೃತ್ಯಗಳ ಬಗ್ಗೆ ಶೂನ್ಯ ಸಹಿಷ್ಣುತೆ ಇರುತ್ತದೆ”, ನೀಟ್ ಮರು ಪರೀಕ್ಷೆಯನ್ನು ಜೂನ್ ೨೧ ಮತ್ತಷ್ಟು ಬಿಗಿ ಭದ್ರತೆಯಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಪುನರಾವರ್ತಿತ ಪ್ರಶ್ನೆಪತ್ರಿಕೆ ಸೋರಿಕೆಯ ಮೂಲಕ ೨೨.೭ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ಮೇಲೆ “ನೇರ ದಾಳಿ”ಯಾಗಿದೆ ಇಂತಹುದನ್ನು ತಡೆಯಲು ಆನ್ ಮೂಲಕ ಮುಂದಿನ ವರ್ಷದಿಂದ ನೀಟ್ ಪರಿಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಬಾಕ್ಸ್
ಮರು ನೋಂದಣಿ ಅಗತ್ಯವಿಲ್ಲ
ನೀಟ್-ಯುಜಿ ಪರೀಕ್ಷೆಯನ್ನು ಜೂನ್ ೨೧ಕ್ಕೆ ಮರು ನಿಗಧಿ ಮಾಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಮತ್ತೊಮ್ಮೆ ಮುರು ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ- ಎನ್ ಟಿಎ ಹೇಳಿದೆ.
ಮೇ ೩ ರಂದು ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೆ ಜೂನ್ ೨೧ ರಂದು ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಯಾವುದೇ ಹೊಸ ನೋಂದಣಿ ಅಗತ್ಯವಿಲ್ಲ, ಮತ್ತು ಯಾವುದೇ ಹೆಚ್ಚುವರಿ ಪರೀಕ್ಷಾ ಶುಲ್ಕ ವಿಧಿಸಲಾಗುವುದಿಲ್ಲ. ಹೆಚ್ಚುವರಿಯಾಗಿ, ಈಗಾಗಲೇ ಪಾವತಿಸಿದ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಮರುಪಾವತಿಸಲಾಗುತ್ತದೆ ಎಂದು ತಿಳಿಸಿದೆ.



























