Home ಜಿಲ್ಲೆ ತುಮಕೂರು ತೆಂಗಿನ ತೋಟಕ್ಕೆ ಡ್ರೋಣ್ ಮೂಲಕ ಬೇವಿನ ಎಣ್ಣೆ ಸಿಂಪಡಣೆ

ತೆಂಗಿನ ತೋಟಕ್ಕೆ ಡ್ರೋಣ್ ಮೂಲಕ ಬೇವಿನ ಎಣ್ಣೆ ಸಿಂಪಡಣೆ

ಚೇಳೂರು, ಫೆ. ೨೫- ರೈತರು ತಮ್ಮ ತೆಂಗಿನ ತೋಟಗಳಿಗೆ ಡ್ರೋನ್ ಮುಖಾಂತರ ಬೇವಿನ ಎಣ್ಣೆಯನ್ನು ಸಿಂಪಡಿಸುವುದರಿಂದ ನುಸಿ ರೋಗ, ಗರಿ ತಿನ್ನುವ ಹುಳುಗಳ ಬಾಧೆಯನ್ನು ತಡೆಗಟ್ಟಬಹುದು ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಜಗದೀಶ್ ಪಾಟೀಲ್ ಹೇಳಿದರು.


ಗುಬ್ಬಿ ತಾಲ್ಲೂಕಿನ ಸಿ ಎಸ್ ಪುರ ಹೋಬಳಿಯ ಸಿ ಕೊಡಗೇಹಳ್ಳಿ ಗ್ರಾಮದ ಕೃಷ್ಣಪ್ಪ ಅವರ ತೋಟದಲ್ಲಿ ತೆಂಗಿನ ತೋಟಕ್ಕೆ ಡ್ರೋನ್ ಮುಖಾಂತರ ಬೇವಿನ ಎಣ್ಣೆ ಸಿಂಪಡಿಸುವ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಬೇಸಿಗೆ ಹತ್ತಿರ ಬರುತ್ತಿರುವುದರಿಂದ ತೆಂಗಿನ ತೋಟಗಳಲ್ಲಿ ಎಲೆ ತಿನ್ನುವ ಕಪ್ಪು ತಲೆಯ ಹುಳುಗಳ ಕಾಟ ಹೆಚ್ಚಾಗುತ್ತದೆ. ಇದರಿಂದ ತೆಂಗಿನ ತೋಟಗಳಿಗೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೇವಿನ ಎಣ್ಣೆ ಸಿಂಪಡಣೆ ಮಾಡುವುದರಿಂದ ನುಸಿ ರೋಗ ಸೇರಿದಂತೆ ಎಲೆ ತಿನ್ನುವ ಹುಳುಗಳ ಕಾಟವನ್ನು ನಿಯಂತ್ರಣ ಮಾಡಬಹುದು. ಕೃಷ್ಣಪ್ಪ ನವರ ತೋಟದಲ್ಲಿ ಡ್ರೋನ್ ಮುಖಾಂತರ ೧೦ ಸಾವಿರ ಪಿಪಿಎಂ ಬೇವಿನ ಎಣ್ಣೆಯನ್ನು ಸಿಂಪಡಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ರೈತರಿಗೆ ಇದು ಪರಿಸರ ಸ್ನೇಹಿಯಾಗಿದ್ದು ವೆಚ್ಚವು ಕಡಿಮೆಯಾಗುತ್ತದೆ. ಈ ಪ್ರಾತ್ಯಕ್ಷಿಕೆಯ ಫಲಿತಾಂಶವನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಸಿ ಕೊಡಗೇಹಳ್ಳಿ ಗ್ರಾಮದ ಪ್ರತಿ ರೈತರ ತೋಟಗಳಿಗೂ ಬೇವಿನ ಎಣ್ಣೆ ಸಿಂಪಡಿಸುವ ಕಾರ್ಯ ಯೋಜನೆ ರೂಪಿಸುತ್ತೇವೆ ಎಂದು ತಿಳಿಸಿದರು.


ತೋಟದ ಮಾಲಿಕ ಕೃಷ್ಣಪ್ಪ ಮಾತನಾಡಿ, ಕಪ್ಪು ತಲೆಯ ಹುಳುಗಳು ತೆಂಗಿನ ಗರಿಯ ರಸವನ್ನು ಹೀರುವುದರಿಂದ ಇಳುವರಿ ಕುಂಠಿತವಾಗುತ್ತದೆ. ತೋಟ ಗಾರಿಕೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಂತೆ ನಮ್ಮ ತೋಟದಲ್ಲಿ ಡ್ರೋನ್ ಮುಖಾಂತರ ಬೇವಿನ ಎಣ್ಣೆಯನ್ನು ಸಿಂಪಡಿಸಿದ್ದೇವೆ ಎಂದರು.


ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಪರಾಜು ಮಾತನಾಡಿ, ತೆಂಗಿನ ಮರಗಳು ಎತ್ತರವಾಗಿ ಬೆಳೆಯುವುದರಿಂದ ಡ್ರೋನ್ ಮುಖಾಂತರ ನೆತ್ತಿಯ ಮೇಲಿಂದ ಬೇವಿನ ಎಣ್ಣೆಯನ್ನು ಸಿಂಪಡಿಸಿದಾಗ ನುಸಿ ರೋಗ, ಶಿಲೀಂದ್ರಗಳ ಕಾಟಗಳನ್ನು ತಡೆಗಟ್ಟಬಹುದು. ಇದು ರೈತರಿಗೆ ಅನುಕೂಲಕಾರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ೫ ಎಕರೆ ತೋಟಕ್ಕೆ ಹತ್ತು ಸಾವಿರ ಪಿಪಿಎಂ ಬೇವಿನ ಎಣ್ಣೆಯನ್ನು ಸಿಂಪಡಣೆ ಮಾಡಲಾಯಿತು.