Home ಜಿಲ್ಲೆ ಕಲಬುರಗಿ ನೀಲೂರು-ಗುಡೂರು ರಸ್ತೆ ಕಾಮಗಾರಿ ಅಪೂರ್ಣ 4 ವರ್ಷ ಕಳೆದರೂ ಅಧಿಕಾರಿಗಳು ಗಪ್ ಚುಪ್ ! ಗ್ರಾಮಸ್ಥರ...

ನೀಲೂರು-ಗುಡೂರು ರಸ್ತೆ ಕಾಮಗಾರಿ ಅಪೂರ್ಣ 4 ವರ್ಷ ಕಳೆದರೂ ಅಧಿಕಾರಿಗಳು ಗಪ್ ಚುಪ್ ! ಗ್ರಾಮಸ್ಥರ ಆಕ್ರೋಶ

ಕರಜಗಿ:ಮೇ.10:ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ನೀಲೂರು-ಗುಡೂರು ರಸ್ತೆ ನಿರ್ಮಾಣ ಕಾಮಗಾರಿ ನಾಲ್ಕು ವರ್ಷ ಕಳೆದರೂ ಪೂರ್ಣಗೊಳ್ಳದೆ ಇರುವುದರಿಂದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2020-21ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‍ಡಿಬಿ) ಮೈಕ್ರೋ ಯೋಜನೆಯಡಿ ?2 ಕೋಟಿ 57 ಲಕ್ಷ ವೆಚ್ಚದಲ್ಲಿ 2.5 ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ ಗುತ್ತಿಗೆದಾರರು ಸ್ವಲ್ಪ ಪ್ರಮಾಣದ ಕಾಮಗಾರಿ ನಡೆಸಿ ಬಹುಪಾಲು ಹಣ ಎತ್ತಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರಸ್ತೆ ಕಾಮಗಾರಿ ಅಪೂರ್ಣವಾಗಿರುವ ಪರಿಣಾಮ ವಿದ್ಯಾರ್ಥಿಗಳು, ರೈತರು ಹಾಗೂ ಗ್ರಾಮಸ್ಥರು ದಿನನಿತ್ಯ ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಮಳೆಗಾಲದಲ್ಲಿ ರಸ್ತೆ ದುಸ್ಥಿತಿಯಿಂದ ವಾಹನ ಸಂಚಾರ ಕಷ್ಟಕರವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು, ನಡೆದಿರುವ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಬೇಕು ಹಾಗೂ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಜಿಲ್ಲಾ ಆಡಳಿತ ಹಾಗೂ ಕೆಕೆಆರ್‍ಡಿಬಿ ಅಧಿಕಾರಿಗಳು ಸಮಸ್ಯೆಗೆ ತಕ್ಷಣ ಸ್ಪಂದಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಶರಣು ಹಾಳಮಳ್ಳಿ, ಭೀಮ ಬಡದಾಳ, ವಿಶ್ವನಾಥ ಅಷ್ಟಗಿ (ಮಾಜಿ ಗ್ರಾಮ ಪಂಚಾಯತ್ ಸದಸ್ಯ), ರವೀಂದ್ರ ಮಡಿವಾಳ (ಮಾಜಿ ಗ್ರಾಮ ಪಂಚಾಯತ್ ಸದಸ್ಯ), ಮಂಜುನಾಥ್ ಹೊಸಗೌಡರ, ಮಾಂತೇಶ್ ಹೂಗಾರ್, ಮಹಾನಿಂಗಪ್ಪ ನಾಯ್ಕೋಡಿ, ಶಿವಕುಮಾರ್ ಲೋನಿ, ಸೈಬಣ್ಣ ಮುಗುದಿ ಹಾಗೂ ಸದಾನಂದ ಹೂಗಾರ್ ಉಪಸ್ಥಿತರಿದ್ದರು.