ಸೌಲಭ್ಯಗಳಿಗಾಗಿ ಹೋರಾಟದ ಅಗತ್ಯವಿದೆ: ಡಾ. ಬಸವರಾಜ ಕಮಕನೂರ

ಬೀದರ:ಜ.29: ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು 371ಜೆ ತಿದ್ದುಪಡಿ ತರಲಾಗಿದ್ದು, ಇದಕ್ಕಾಗಿ ವೈಜಿನಾಥ ಪಾಟೀಲರಿಂದ ಹಿಡಿದು ಸಾಕಷ್ಟು ಜನಪ್ರತಿನಿಧಿಗಳು ಹೋರಾಟ ಮಾಡಿದ್ದರು. ಆದರೆ 371ಜೆ ಇಂದು ಸಮರ್ಪಕ ಜಾರಿಯಾಗುತ್ತಿಲ್ಲ. ಈ ಕುರಿತು ವಿದ್ಯಾರ್ಥಿಗಳು ಹಾಗೂ ಬೋಧಕರು ಹೋರಾಟ ಮಾಡುವ ಅಗತ್ಯವಿದೆ ಎಂದು ಕಲಬುರಗಿಯ ಡಾ. ಬಿ.ಆರ್.ಅಂಬೇಡ್ಕರ್ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಡಾ. ಬಸವರಾಜ ಕಮಕನೂರ ತಿಳಿಸಿದರು.
ಬೀದರ ವಿಶ್ವವಿದ್ಯಾಲಯ ಬೀದರ ಹಾಗೂ ಕಲಂ 371ಜೆ ಸಮಗ್ರ ಅನುಷ್ಠಾನ ಹೋರಾಟ ಸಮಿತಿ ಕಲ್ಯಾಣ ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ ಕಲಂ 371ಜೆ ತಿದ್ದುಪಡಿ ದಿನಾಚರಣೆ ಹಾಗೂ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿದರು.
ಇಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ತಲಾದಾಯ ಕಡಿಮೆಯಿದೆ. ಸಾಯುವವರ ಸಂಖ್ಯೆಯೂ ಹೆಚ್ಚಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದಿದೆ. 74 ಪ್ರತಿಶತ ಜನರು ರಕ್ತಹೀನತೆಯಿಂದ ಬಳಲುತಿದ್ದಾರೆ. ಪ್ರತೀ ಹತ್ತು ಸಾವಿರ ಜನರಿಗೆ ಒಬ್ಬ ವೈದ್ಯ ಬೇಕು. ಆದರೆ 40 ಸಾವಿರ ಜನರಿಗೆ ಒಬ್ಬ ವೈದ್ಯರಿದ್ದಾರೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಬೀದರ ಜಿಲ್ಲೆ 22ನೇ ಸ್ಥಾನದಲ್ಲಿದೆ. ನಂಜುಂಡಪ್ಪ ವರದಿ ಪ್ರಕಾರ ಕೆ.ಎ.ಎಸ್. ಅಧಿಕಾರಿಗಳ ಸಂಖ್ಯೆ ಕೇವಲ 2 ಪ್ರತಿಶತವಿದೆ. ಹೀಗಾಗಿ ಈ ಭಾಗದಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡಲಾಗುತ್ತಿಲ್ಲ. ಇದಕ್ಕೆಲ್ಲ ಕಾರಣ ನಮ್ಮಲ್ಲಿರುವ ಹೋರಾಟದ ಕಿಚ್ಚು ಮರೆಯಾಗಿದೆ. ವಿದ್ಯಾರ್ಥಿಗಳು ಈ ಕುರಿತು ಗಂಭೀರವಾಗಿ ಚಿಂತಿಸಿ ಹೋರಾಟದ ಮೂಲಕ 371ಜೆ ಕಲಂ ತಿದ್ದುಪಡಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ನಾಗಭೂಷಣ ಕಮಠಾಣೆ ಮಾತನಾಡಿ ದಿ. ವೈಜಿನಾಥ ಪಾಟೀಲ, ಮಾಜಿ ಸಿಎಂ ಧರಂಸಿಂಗ್ ಹಾಗೂ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಸಾಕಷ್ಟು ಹೋರಾಡಿ 371ಜೆ ಕಲಂ ತಿದ್ದುಪಡಿ ಮಾಡಿ ಈ ಭಾಗಕ್ಕೆ ಸೌಲಭ್ಯ ಒದಗಿಸಿದ್ದರು. ಆದರೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ನಮ್ಮ ಬೀದರ ವಿ.ವಿ.ಯಲ್ಲಿ ಸುಮಾರು 29 ಹುದ್ದೆಗಳು ಖಾಲಿಯಿವೆ. ಆದರೆ ಭರ್ತಿ ಮಾಡುತ್ತಿಲ್ಲ. ಮಲಗಿದ್ದವರನ್ನು ಎದ್ದೇಳಿಸಲಾಯಿತು. ಆದರೆ ಎದ್ದವರನ್ನು ಮತ್ತೆ ಹೋರಾಡುವಂತೆ ಪ್ರೇರಣೆ ನೀಡಲು ಇಂತಹ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದರು.
ಕಲಂ 371ಜೆ ಸಮಗ್ರ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಅಶೋಕ ಮಾನೂರೆ ಮಾತನಾಡಿ ಜನವರಿ 1, 2013ರಲ್ಲಿ 371ಜೆ ತಿದ್ದುಪಡಿ ಜಾರಿಗೆ ತರಲಾಯಿತು. ದಿ. ವೈಜಿನಾಥ ಪಾಟೀಲರ ಸತತ 17 ವರ್ಷಗಳ ಹೋರಾಟದ ಫಲವಾಗಿ ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂಸಿಂಗ್ ಅವರ ಇಚ್ಛಾಶಕ್ತಿಯಿಂದ ತಿದ್ದುಪಡಿ ಮಾಡಿದರೂ ಕೂಡ ಸಮರ್ಪಕ ಜಾರಿಗೆ ಮತ್ತೆ ಹೋರಾಟದ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ದಿವ್ಯ ಸಾನಿಧ್ಯವನ್ನು ಸಮಿತಿಯ ಗೌರವಾಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಬೀದರ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಬಿ.ಎಸ್.ಬಿರಾದಾರ ವಹಿಸಿದ್ದರು. ವೇದಿಕೆ ಮೇಲೆ ಬೀದರ ವಿ.ವಿ.ಯ ರೆಜಿಸ್ಟ್ರಾರ್ ಪೆÇ್ರ. ಪರಮೇಶ್ವರ ನಾಯಕ್, ಸಿಂಡಿಕೇಟ್ ಸದಸ್ಯರಾದ ಶಾಂತಲಿಂಗ ಸಾವಳಗಿ, ಪೆÇ್ರ. ಶಿವನಾಥ ಪಾಟೀಲ, ಪೆÇ್ರ. ವಿಠಲದಾಸ ಪ್ಯಾಗೆ, ಅರ್ಜುನ ಕನಕ, ಅಬ್ದುಲ್ ಸತ್ತಾರ್, ಕು.ವೈಷ್ಣವಿ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬೀದರ ವಿಶ್ವವಿದ್ಯಾಲಯ ಹಾಗೂ ಕಲಂ 371ಜೆ ಸಮಗ್ರ ಅನುಷ್ಠಾನ ಹೋರಾಟ ಸಮಿತಿ ವತಿಯಿಂದ ತಯಾರಿಸಲಾದ ಗೋಡೆ ಕ್ಯಾಲೆಂಡರ್, ಟೇಬಲ್ ಕ್ಯಾಲೆಂಡರ್ ಹಾಗೂ ದಿನಚರಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಡಾ. ರಾಮಚಂದ್ರ ಗಣಾಪೂರ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ನ್ಯಾಯವಾದಿಗಳು, ಗಣ್ಯರು ಹಾಗೂ ವಿಶ್ವವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.