ಎಕಲಾರ ಶಾಲಾ ಆವರಣದಲ್ಲಿ ಸಾಲುಮರದ ತಿಮ್ಮಕ್ಕ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಕ್ರಮ : ಪಿಡಿಒ ಪಾಟೀಲ

ಔರಾದ್ : ನ.೩೦:ಸಾಲುಮರದ ತಿಮ್ಮಕ್ಕ ಭೇಟಿ ನೀಡಿದ ಎಕಲಾರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಅವರ ಸ್ಮರಣಾರ್ಥ ಸ್ಮಾರಕ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಕಲಾರ ಗ್ರಾಪಂ ಪಂಚಾಯತ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ ಪಾಟೀಲ್ ಭರವಸೆ ನೀಡಿದರು.
ತಾಲೂಕಿನ ಎಕಲಾರ ಪ್ರೌಢಶಾಲಾ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಆಯೋಜಿಸಿದ ಸಂವಿಧಾನ ದಿನಾಚರಣೆ ಹಾಗೂ ಸಾಲುಮರದ ತಿಮ್ಮಕ್ಕ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ ಅವರ ಮನವಿಗೆ ಸ್ಪಂದಿಸಿದ ಅವರು, ಪರಿಸರವಾದಿ, ಮಕ್ಕಳಂತೆ ಸಸಿಗಳಿಗೆ ಪೋಷಿಸಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರು ಎಕಲಾರ ಗ್ರಾಮಕ್ಕೆ ಭೇಟಿ ನೀಡಿದ್ದು ತುಂಬ ಸಂತೋಷ. ಅವರ ಸ್ಮರಣಾರ್ಥ ಇಲ್ಲಿ ಸ್ಮಾರಕ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದರು.
ಡಾ. ವೈಜಿನಾಥ ಬುಟ್ಟೆ ಮಾತನಾಡಿ, ಭಾರತದ ಶ್ರೇಷ್ಠ ಸಂವಿಧಾನ ನಾವೆಲ್ಲರೂ ಅರಿಯಬೇಕು. ಅರಿತು ಬಾಳಿದಾಗ ಮಾತ್ರ ಸಮೃದ್ಧ ಭಾರತ ನಿರ್ಮಾಣ ಸಾಧ್ಯ. ಶಿಕ್ಷಣ ಪಡೆಯುವ ಉದ್ದೇಶ ದೇಶವನ್ನು ಸಮರ್ಥವಾಗಿ ಮುನ್ನಡೆಸುವುದಾಗಿದೆ ಎಂದರು.
ಪತ್ರಕರ್ತ ಮಲ್ಲಪ್ಪ ಗೌಡ ಮಾತನಾಡಿ, ರಿಲಯನ್ಸ್ ಫೌಂಡೇಶನ್ ವತಿಯಿಂದ ಸಾಲುಮರದ ತಿಮ್ಮಕ್ಕ ಅವರನ್ನು ಅಂದು ಕರೆತರಲಾಗಿತ್ತು. ಅವರು ನೆಟ್ಟ ಸಸಿಗಳು ಪ್ರೌಢಶಾಲೆಯ ಆವರಣದಲ್ಲಿ ಸಮೃದ್ಧವಾಗಿ ಬೆಳೆದಿರುವುದು ಕಂಡು ಸಂತೋಷವಾಗಿದೆ. ತಿಮ್ಮಕ್ಕ ಅವರ ಕಾರ್ಯ ಸದಾ ಪ್ರೇರಣೆ ನೀಡಲಿದೆ ಎಂದರು.
ಕಿರಣ ಹಿಪ್ಪಳಗಾವೆ ಕನ್ನಡ ಸಾಹಿತ್ಯದಲ್ಲಿ ಸಂವಿಧಾನದ ಆಶಯಗಳು ಕುರಿತು ಉಪನ್ಯಾಸ ಮಂಡಿಸಿದರು. ಎಕಲಾರ ಗ್ರಾಪಂ ಅಧ್ಯಕ್ಷೆ ಸುನೀತಾ ಮಣಿಗೆಂಪೂರೆ ಸಮಾರಂಭ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಶಿವಕುಮಾರ ಪಾಟೀಲ್ ಅಧ್ಯಕ್ಷತೆ ವಹಿಸಿದರು. ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ ಪ್ರಾಸ್ತಾವಿಕ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಶಿಕ್ಷಕ ಜಿ.ಬಿ ಪಾಂಚಾಳ, ಪ್ರಭು ಬಾಳೂರೆ, ಮಲ್ಲಿಕಾರ್ಜುನ ಹಿಪ್ಪಳಗಾವೆ, ಚಂದ್ರಕಾAತ, ಯಶವಂತರಾವ ಬೋರಾಳೆ, ಸಿದ್ದಾರೆಡ್ಡಿ, ಸೂರ್ಯಕಾಂತ ನಾಗೂರೆ, ಶ್ರೀಮಂತ ವಳಸಂಗೆ, ವಿಜಯಲಕ್ಷ್ಮೀ ನಿರ್ಮಳೆ, ರಮೇಶ ಹಿಪ್ಪಳಗಾವೆ, ಶಿವರಾಜ ಬಿರಾದಾರ, ಸತೀಶ ಮಜಗೆ ಸೇರಿದಂತೆ ಇನ್ನಿತರರಿದ್ದರು.
ಇದೆ ಸಂದರ್ಭದಲ್ಲಿ ಶಾಲಾ ಪ್ರಾಂಗಣದಲ್ಲಿ ಐದು ಸಸಿಗಳು ನೆಡುವ ಮೂಲಕ ಮಕ್ಕಳಿಗೆ ಪರಿಸರ ಸಂರಕ್ಷಣೆಗೆ ಮುಂದಾಗುವAತೆ ಪ್ರೇರೆಪಿಸಲಾಯಿತು.