ಉಪರಾಷ್ಟ್ರಪತಿ ಚುನಾವಣೆ
ನವದೆಹಲಿ,ಆ.೨೦- ಮುಂದಿನ ತಿಂಗಳು ೯ ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಸಿ.ಪಿ. ರಾಧಾಕೃಷ್ಣನ್ ಇಂದು ನಾಮಪತ್ರ ಸಲ್ಲಿಸಿದರು.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಜೊತೆಗೆ ಎನ್ ಡಿಎ ಮಿತ್ರಪಕ್ಷದ ಹಲವು ನಾಯಕರೂ ಕೂಡ ಭಾಗಿಯಾಗಿದ್ದರು.
ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿ.ಸಿ. ಮೋದಿ ಅವರಿಗೆ ನಾಲ್ಕು ಸೆಟ್ ಗಳ ನಾಮಪತ್ರಗಳನ್ನು ಸಲ್ಲಿಸಿದರು, ನಾಲ್ಕು ಸೆಟ್ ನಾಮಪತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ರಾಜನಾಥ್ ಸಿಂಗ್ ಸಿಂಗ್, ಅಮಿತ್ ಶಾ ಮತ್ತು ಜೆಡಿ ಯು ನಾಯಕ ರಾಜೀವ್ ರಂಜನ್ ಸಿಂಗ್ ಪ್ರಮುಖ ಪ್ರತಿಪಾದಕರಾಗಿದ್ದಾರೆ.
ಚುನಾವಣಾಧಿಕಾರಿ ನಾಮಪತ್ರಗಳನ್ನು ಪರಿಶೀಲಿಸಿದರು. ನಂತರ ರಾಧಾಕೃಷ್ಣನ್ ನೋಂದಣಿಗೆ ಸಹಿ ಹಾಕಿದರು. ನಂತರ ರಿಟರ್ನಿಂಗ್ ಅಧಿಕಾರಿ ಪ್ರಧಾನಮಂತ್ರಿಗೆ ನಾಮಪತ್ರಗಳ ಸ್ವೀಕೃತಿ ಚೀಟಿಯನ್ನು ಹಸ್ತಾಂತರಿಸಿದರು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಹಿರಿಯ ಸಚಿವರಾದ ಪ್ರಹ್ಲಾದ್ ಜೋಶಿ, ಧರ್ಮೇಂದ್ರ ಪ್ರಧಾನ್ ಮತ್ತು ಟಿಡಿಪಿ ನಾಯಕ ಮತ್ತು ಕೇಂದ್ರ ಸಚಿವ ಕೆ. ರಾಮ್ ಮೋಹನ್ ನಾಯ್ಡು, ಶಿವಸೇನಾ ನಾಯಕ ಶ್ರೀಕಾಂತ್ ಶಿಂಧೆ, ಎಲ್‌ಜೆಪಿಎಸ್‌ಪಿ ನಾಯಕ ಚಿರಾಗ್ ಪಾಸ್ವಾನ್ ಸೇರಿದಂತೆ ಇತರ ಎನ್‌ಡಿಎ ನಾಯಕರು ಉಪಸ್ಥಿತರಿದ್ದರು.
ಎನ್‌ಡಿಎ ಅಭ್ಯರ್ಥಿಯಾಗಿರುವ ರಾಧಾಕೃಷ್ಣನ್ ಸಂಸತ್ ಸಂಕೀರ್ಣದಲ್ಲಿರುವ ಪ್ರತಿಮೆಗಳನ್ನು ಹೊಂದಿರುವ ಪ್ರೇರಣಾ ಸ್ಥಳದಲ್ಲಿ ಮಹಾತ್ಮ ಗಾಂಧಿ ಮತ್ತು ಇತರ ರಾಷ್ಟ್ರೀಯ ನಾಯಕರಿಗೆ ಗೌರವ ಸಲ್ಲಿಸಿದರು.
ಸೆಪ್ಟೆಂಬರ್ ೯ ರಂದು ನಡೆಯಲಿರುವ ಮುಂಬರುವ ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲ ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ ಅವರನ್ನು ಅಭ್ಯರ್ಥಿಯನ್ನಾಗಿ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಬಿಜೆಪಿಯ ಸಂಸದೀಯ ಮಂಡಳಿ ಸಭೆಯಲ್ಲಿ ರಾಧಾಕೃಷ್ಣನ್ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಅವರ ಹೆಸರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜೆ.ಪಿ. ನಡ್ಡಾ ಘೋಷಿಸಿದ್ದರು.
ರಾಧಾಕೃಷ್ಣನ್ ೨೦೨೪ರ ಜುಲೈ ೩೧ ರಂದು ಮಹಾರಾಷ್ಟ್ರ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರ ನೇಮಕಾತಿಗೆ ಮೊದಲು, ಅವರು ಸುಮಾರು ಒಂದೂವರೆ ವರ್ಷಗಳ ಕಾಲ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.
ಜಾರ್ಖಂಡ್ ರಾಜ್ಯಪಾಲರಾಗಿ ರಾಧಾಕೃಷ್ಣನ್ ಅವರನ್ನು ಭಾರತದ ರಾಷ್ಟ್ರಪತಿಗಳು ತೆಲಂಗಾಣ ರಾಜ್ಯಪಾಲರ ಕಾರ್ಯಗಳನ್ನು ನಿರ್ವಹಿಸಲು ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಿದ್ದರು.
ನಾಲ್ಕು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ರಾಧಾಕೃಷ್ಣನ್ ಅವರು ತಮಿಳುನಾಡಿನ ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಗೌರವಾನ್ವಿತ ಹೆಸರು ಪಡೆದುಕೊಂಡಿದ್ದಾರೆ.
೧೯೫೭ ರ ಅಕ್ಟೋಬರ್ ೨೦ ರಂದು ತಮಿಳುನಾಡಿನ ತಿರುಪ್ಪೂರಿನಲ್ಲಿ ಜನಿಸಿದ ರಾಧಾಕೃಷ್ಣನ್ ಅವರು ವ್ಯವಹಾರ ಆಡಳಿತದಲ್ಲಿ ಪದವಿ ಪಡೆದುಕೊಂಡಿದ್ದರು. ಆರೆಸ್‌ಎಸ್ ಸ್ವಯಂಸೇವಕರಾಗಿ ಪ್ರಾರಂಭಿಸಿ, ೧೯೭೪ ರಲ್ಲಿ ಭಾರತೀಯ ಜನಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.

























