Home ಜಿಲ್ಲೆ ತುಮಕೂರು ಆಗ್ನೇಯ ಶಿಕ್ಷಕರ ಕ್ಷೇತ್ರ ಎನ್‌ಡಿಎ ಅಭ್ಯರ್ಥಿ ಮತಯಾಚನೆ

ಆಗ್ನೇಯ ಶಿಕ್ಷಕರ ಕ್ಷೇತ್ರ ಎನ್‌ಡಿಎ ಅಭ್ಯರ್ಥಿ ಮತಯಾಚನೆ

ತುಮಕೂರು, ಅ. ೨- ಈ ತಿಂಗಳ ೨೩ ರಂದು ನಡೆಯುವ ಆಗ್ನೇಯ ಪದವಿಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಜಿಲ್ಲೆಯಾದ್ಯಂತ ಮತದಾರರ ಬಳಿ ತೆರಳಿ ಮತಯಾಚಿಸಿದರು.


ಕೊರಟಗೆರೆ ಹಾಗೂ ಮಧುಗಿರಿ ತಾಲ್ಲೂಕಿನಲ್ಲಿ ಪದವೀಧರ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು. ಎರಡೂ ತಾಲ್ಲೂಕುಗಳ ಬಿಜೆಪಿ, ಜೆಡಿಎಸ್ ಮುಖಂಡರು ಅಭ್ಯರ್ಥಿ ಕೆ.ಎಂ.ಸುರೇಶ್ ಜತೆಗೂಡಿ ಪ್ರಚಾರ ನಡೆಸಿದರು.


ಕೊರಟಗೆರೆಯಲ್ಲಿ ಕಟ್ಟೆಗಣಪತಿಗೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ ಮುಖಂಡರು ಕೊರಟಗೆರೆ ಹಾಗೂ ಮಧುಗಿರಿ ತಾಲ್ಲೂಕುಗಳ ವಿವಿಧ ಶಿಕ್ಷಣ ಸಂಸ್ಥೆಗಳ ಶಾಲಾ ಕಾಲೇಜು, ಕಚೇರಿಗಳಿಗೆ ತೆರಳಿ ಮತಯಾಚಿಸಿದರು.


ಪ್ರಚಾರದ ವೇಳೆ ಮಾತನಾಡಿದ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿರುವ ನನಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಪಕ್ಷ ನನಗೆ ಅವಕಾಶ ಮಾಡಿಕೊಟ್ಟಿದೆ. ನಾನು ದಾವಣಗೆರೆ ಜಿಲ್ಲೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನಾಗಿ, ಕಾರ್ಯದರ್ಶಿಯಾಗಿ, ನಗರಸಭಾ ಅಧ್ಯಕ್ಷನಾಗಿ ರಾಜಕೀಯ ಕ್ಷೇತ್ರಕ್ಕೆ ಕೆಳಹಂತದಿಂದ ಬಂದಿದ್ದೇನೆ ಎಂದರು.


ತಮ್ಮ ಸೋಮೇಶ್ವರ ಎಜುಕೇಶನಲ್ ಟ್ರಸ್ಟ್ ಹಾಗೂ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಮೂಲಕ ಸಾರ್ವಜನಿಕ ಸೇವಾ ಕಾರ್ಯದಲ್ಲಿ ತೊಡಗಿ ಕೊಂಡಿರುವುದಾಗಿ ಹೇಳಿದ ಅವರು, ಮುಂದಿನ ದಿನಗಳಲ್ಲಿ ತಮ್ಮ ಟ್ರಸ್ಟ್ ವತಿಯಿಂದ ಕ್ಷೇತ್ರದ ಐದು ಜಿಲ್ಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕೋಚಿಂಗ್ ಸೆಂಟರ್, ಗ್ರಂಥಾಲಯ ಸ್ಥಾಪಿಸುವುದಾಗಿ ಭರವಸೆ ನೀಡಿದರು.


ಚುನಾವಣೆಯಲ್ಲಿ ಗೆದ್ದ ನಂತರ ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗಿ ನಿರುದ್ಯೋಗ ಸಮಸ್ಯೆ ನಿವಾರಣೆ, ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ಪದವೀಧರರ ಸಮಸ್ಯೆಗಳು, ಉದ್ಯೋಗಾವಕಾಶಗಳು ಹಾಗೂ ಶಿಕ್ಷಣ ಕ್ಷೇತ್ರದ ಬೇಡಿಕೆಗಳ ಪರವಾಗಿ ನಿಲ್ಲುತ್ತೇನೆ, ಶಿಕ್ಷಕರ ಸಮಸ್ಯೆಗಳ ಪರಿಹಾರ ಸೇರಿದಂತೆ ಪದವೀಧರರ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಪ್ರಬಲವಾಗಿ ಹೋರಾಟ ಮಾಡುತ್ತೇನೆ, ಪದವೀಧರರ ಸಮಸ್ಯೆಗಳನ್ನು ಅರಿತಿರುವ ಅಭ್ಯರ್ಥಿಯಾಗಿದ್ದು, ಈ ಬಾರಿ ತಮ್ಮ ಮತ ನೀಡಿ ಬೆಂಬಲಿಸುವಂತೆ ಮನವಿ ಮಾಡಿದರು.


ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.