Home ಜಿಲ್ಲೆ ಕಲಬುರಗಿ ನಾಯಕ ವಾಲ್ಮೀಕಿ ಜನಾಂಗಕ್ಕೆ ಮಾತ್ರ ಎಸ್‍ಟಿ ಸೌಲಭ್ಯಕ್ಕೆ ಆಗ್ರಹ

ನಾಯಕ ವಾಲ್ಮೀಕಿ ಜನಾಂಗಕ್ಕೆ ಮಾತ್ರ ಎಸ್‍ಟಿ ಸೌಲಭ್ಯಕ್ಕೆ ಆಗ್ರಹ

ಜೇವರಗಿ,ಮೇ 10 : ಜಿಲ್ಲೆಯಲ್ಲಿ ನಾಯಕ ವಾಲ್ಮೀಕಿ ಜನಾಂಗದಲ್ಲಿ ಬರುವ “ನಾಯಕ ತಳವಾರ” ಜಾತಿವರಿಗೆ ಮಾತ್ರ ಎಸ್‍ಟಿ ಪ್ರಮಾಣ ಪತ್ರ ನೀಡಬೇಕು ಹಾಗೂ ಹಿಂದುಳಿದ ವರ್ಗದಲ್ಲಿ ಬರುವ “ತಳವಾರ” ಜಾತಿವರಿಗೆ ಯಾವುದೇ ಕಾರಣಕ್ಕೂ ಎಸ್‍ಟಿ ಪ್ರಮಾಣ ಪತ್ರಗಳನ್ನು ನೀಡಬಾರದು ಎಂದು ಸರ್ಕಾರದ ಆದೇಶಗಳನ್ನು ಉಲ್ಲೇಖಿಸಿ ರಾಜ್ಯ ಎಸ್‍ಸಿ,ಎಸ್‍ಟಿ ನಕಲಿ ಜಾತಿ ಪ್ರಮಾಣ ಪತ್ರ ತಡೆ ಸಮಿತಿಯ ರಾಜ್ಯಾಧ್ಯಕ್ಷ ಶ್ರವಣಕುಮಾರ ಡಿ ನಾಯಕ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ನಾಯಕ ವಾಲ್ಮೀಕಿ ಜನಾಂಗಕ್ಕೆ ಸೇರಿದ ತಳವಾರ ಜಾತಿವರು ಇರುವುದಿಲ್ಲ. ಇಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ತಳವಾರ ಸಮುದಾಯವೇ ಹೆಚ್ಚಿದ್ದು, ಇವರಿಗೆ ಎಸ್‍ಟಿ ಪ್ರಮಾಣ ಪತ್ರ ನೀಡುವುದು ಕಾನೂನುಬಾಹಿರವಾಗಿದೆ ಎಂದು ತಿಳಿಸಲಾಗಿದೆ.
ಈ ಕುರಿತು ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಹೈಕೋರ್ಟ್ ಸಹ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ರದ್ದುಪಡಿಸಬೇಕೆಂದು ಆದೇಶ ನೀಡಿದೆ. ರಾಜ್ಯ ಸರ್ಕಾರವೂ ಸೆಕ್ಷನ್ 4ಈ ಅಡಿಯಲ್ಲಿ ಇಂತಹ ಪ್ರಮಾಣ ಪತ್ರಗಳಿಗೆ ತಾತ್ಕಾಲಿಕ ತಡೆ ನೀಡಲು ಸೂಚಿಸಿದ್ದರೂ, ಜಿಲ್ಲಾಡಳಿತ ಮಟ್ಟದಲ್ಲಿ ಪೂರ್ಣ ಪಾಲನೆ ಆಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆ, ಮೇ 7, 2026 ರಂದು ಹೊರಡಿಸಿದ ಆದೇಶದಲ್ಲಿ ಜಿಲ್ಲಾಧಿಕಾರಿಗಳು ಎಲ್ಲಾ ತಹಸೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಸರ್ಕಾರದ ನಿಯಮಾವಳಿಗಳ ಪ್ರಕಾರ ಮಾತ್ರ ಜಾತಿ ಪ್ರಮಾಣ ಪತ್ರಗಳನ್ನು ನೀಡಬೇಕು ಎಂದು ತಿಳಿಸಿದ್ದಾರೆ.ಹಿಂದುಳಿದ ವರ್ಗಕ್ಕೆ ಸೇರಿದ ತಳವಾರ ಜಾತಿವರು “ನಾಯ್ಕಡ” ಅಥವಾ “ನಾಯಕ ತಳವಾರ” ಎಂಬ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಎಸ್‍ಟಿ ಪ್ರಮಾಣ ಪತ್ರ ಪಡೆಯದಂತೆ ಎಚ್ಚರಿಕೆ ನೀಡಲಾಗಿದೆ ಶ್ರವಣಕುಮಾರ ಡಿ ನಾಯಕ ಅವರು ಕೂಡ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಮನವಿ ಮಾಡಿದ್ದಾರೆ.