
ಔರಾದ್:ಜೂ.೮: ಜಗತ್ತಿನಲ್ಲಿ ಜೀವಿಸುತ್ತಿರುವ ಪ್ರತಿಯೊಂದು ಜೀವ ಸಂಕುಲಕ್ಕೂ ಆಸರೆ ಪ್ರಕೃತಿ. ಅದನ್ನು ಉಳಿಸಿ ಬೆಳೆಸಿದರೆ ಮಾತ್ರ ಮುಂದಿನ ಪೀಳಿಗೆಯವರು ಜೀವಿಸಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರೂ ಪರಿಸರವನ್ನು ರಕ್ಷಿಸುವತ್ತ ಗಮನ ಹರಿಸಬೇಕು ಎಂದು ತಹಸೀಲ್ದಾರ ಮಹೇಶ ಪಾಟೀಲ್ ಹೇಳಿದರು.
ಪಟ್ಟಣದ ಬಸವ ಗುರುಕುಲ ಪ್ರೌಢಶಾಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಹಾಗೂ ಪ್ರಾದೇಶಿಕ ಅರಣ್ಯ ವಲಯ ಸಂತಪೂರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು “ಮನೆಗೊಂದು ಮರ ಊರಿಗೂಂದು ವನ” ನಿರ್ಮಾಣವಾಗಬೇಕು ವಿಶೇಷವಾಗಿ ಔರಾದ್ ತಾಲ್ಲೂಕಿನಲ್ಲಿ ಬಯಲು ಪ್ರದೇಶ ವಿದ್ದು ಹೆಚ್ಚು ಗಿಡ ಮರಗಳನ್ನು ಬೆಳೆಸುವ ಅವಶ್ಯಕತೆ ಇದೆ. ನಾವೆಲ್ಲರೂ ಮುಂದಿನ ಪೀಳಿಗೆಗೆ ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಓಂಪ್ರಕಾಶ್ ದಡ್ಡೆ ಮಾತನಾಡಿ, ಸಮಾಜದಿಂದ ಎಲ್ಲವನ್ನು ಪಡೆಯುವ ಮನುಷ್ಯರು ಸಮಾಜಕ್ಕೆ ಕೊಡುಗೆ ನೀಡುವುದನ್ನು ಮರೆಯುತ್ತಾರೆ. ಪರಿಸರ ಸಂರಕ್ಷಣೆ ಸಮಾಜದ ಅಭಿವೃದ್ಧಿಗೆ ಮುಖ್ಯವಾಗಿದೆ. ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಉದ್ಯಮಿ ಗೌರವ ದೇಶಮುಖ ಮಾತನಾಡಿ, ಪರಿಸರ ದಿನಾಚರಣೆ ಒಂದು ದಿನಕ್ಕೆ ಸಿಮಿತವಾಗದೆ ದಿನ ನಿತ್ಯ ಪರಿಸರ ದಿನಾಚರಣೆ ಆಚರಿಸುವ ನಿಟ್ಟಿನಲ್ಲಿ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ಪರಿಸರ ಪ್ರೇಮಿ ರಿಯಾಜಪಾಶಾ ಕೊಳ್ಳೂರ ಮಾತನಾಡಿ, ಹಣವೊಂದೇ ಎಲ್ಲಾ ಎಂಬ ಅಪನಂಬಿಕೆಯಲ್ಲಿ ಬದುಕುತ್ತಿರುವ ಜನರಿಗೆ ಭೂಮಿಯ ಮೇಲೆ ಜೀವ ಸಂಕುಲ ಬದುಕಲು ಮುಖ್ಯವಾಗಿ ಬೇಕಿರುವುದು ಪರಿಸರ ಎಂದು ತಿಳಿದು ಅದರ ರಕ್ಷಣೆಗೆ ಮುಂದಾಗಬೇಕು.
ಇಂದು ನಾವೆಲ್ಲ ಸಮಯಕ್ಕೆ ಸರಿಯಾಗಿ ಮಳೆ ಬೆಳೆ ಕಾಣಲು ಪರಿಸರ ಒಂದೇ ಕಾರಣ. ನಮ್ಮ ಸುತ್ತಲಿನ ಪರಿಸರದಲ್ಲಿ ಹೆಚ್ಚು ಮರ ಗಿಡ ಬೆಳೆಸುವುದರಿಂದ ಮಾತ್ರ ಉತ್ತಮ ಪರಿಸರ, ಗಾಳಿ ಬೆಳಕು ದೊರೆಯಲಿದೆ. ಪ್ರತಿಯೊಬ್ಬರೂ ಆರೋಗ್ಯದಿಂದಿರಲು ಪರಿಸರ ಅಪಾರ ಕೊಡುಗೆಯನ್ನು ನೀಡುತ್ತಿದೆ ಅದಕ್ಕಾಗಿ ಗಿಡ ಮರಗಳನ್ನು ಬೆಳೆಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ನಿರ್ಮಲಾ ಶೇರಿ, ಇಂದುಮತಿ ಎಡವೆ, ಹಿರಿಯ ಪತ್ರಕರ್ತ ಶರಣಪ್ಪ ಚಿಟ್ಮೆ, ಉಪ ವಲಯ ಅರಣ್ಯಾಧಿಕಾರಿ ಬಾಲಾಜಿ ಕೆ, ಗಸ್ತು ಅರಣ್ಯ ಪಾಲಕ ಬಸವರಾಜ, ಜೆಸ್ಕಾಂ ಕಿರಿಯ ಸಹಾಯಕ ಗಣಪತಿ ಮೇತ್ರೆ, ಕರವೇ ಅಧ್ಯಕ್ಷ ಅನಿಲ ದೆವಕತ್ತೆ, ಶರಣಪ್ಪ ಗಾದಗೆ, ನಾಗನಾಥ ಶಂಕು, ಸಂಜುಕುಮಾರ ವಲಾಂಡೆ, ಬಸವರಾಜ ತಳವಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.