Home ಜಿಲ್ಲೆ ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ

ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ

ಬೀದರ್:ಮಾ.12: ಬೀದರ್ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಹಾಗೂ ನ್ಯಾಕ್ ‘ಬಿ’ ಗ್ರೇಡ್ ಮಾನ್ಯತೆ ಪಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮನ್ನಳ್ಳಿ ವತಿಯಿಂದ 2025-26ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ವಾರ್ಷಿಕ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

“ನನ್ನ ಭಾರತಕ್ಕಾಗಿ ಯುವಕರು” ಮತ್ತು “ಡಿಜಿಟಲ್ ಸಾಕ್ಷರತೆಗಾಗಿ ಯುವಕರು” ಎಂಬ ಧ್ಯೇಯ ವಾಕ್ಯದೊಂದಿಗೆ ಮಾರ್ಚ್ 6ರಿಂದ 12ರವರೆಗೆ ಈ ವಿಶೇಷ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದ ಉದ್ಘಾಟನೆಯನ್ನು ಬೀದರ್ ವಿಶ್ವವಿದ್ಯಾಲಯದ ಕುಲಸಚಿವರಾದ ಪೆÇ್ರಫೆಸರ್ ಪರಮೇಶ್ವರ್ ನಾಯಕ ನೆರವೇರಿಸಿದರು.

ಈ ಶಿಬಿರದಲ್ಲಿ ಸುಮಾರು 60 ವಿದ್ಯಾರ್ಥಿಗಳು ಭಾಗವಹಿಸಿದ್ದು, ಪ್ರತಿದಿನವೂ ವಿವಿಧ ವಿಷಯಗಳ ಕುರಿತು ಉಪನ್ಯಾಸ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸದೃಢ ಭಾರತಕ್ಕಾಗಿ ಜನರ ಪಾತ್ರ, ನನ್ನ ಭಾರತಕ್ಕಾಗಿ ಯುವಕರು, ಯುವಜನರಲ್ಲಿ ಆರೋಗ್ಯ ಅರಿವು, ಸದೃಢ ಭಾರತಕ್ಕಾಗಿ ಮಹಿಳೆಯರ ಪಾತ್ರ ಹಾಗೂ ಸಾಂಸ್ಕøತಿಕ ಪರಂಪರೆ ಮತ್ತು ರಾಷ್ಟ್ರೀಯತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕಾರ್ಯಕ್ರಮಗಳು ನಡೆದವು.

ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರೀಯತೆ ಕುರಿತ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಸೈನಿಕರು ಹಾಗೂ ಹಿರಿಯ ಪತ್ರಕರ್ತರಾದ ಅಶೋಕ್ ಕುಮಾರ್ ಕರಂಜಿ ಭಾಗವಹಿಸಿ ಮಾತನಾಡಿದರು. ಸಂಸ್ಕೃತಿ ಎಂದರೆ ನಮ್ಮ ಜೀವನ ಶೈಲಿ, ಆಚರಣೆಗಳು, ಭಾಷೆ, ಕಲೆ, ಸಂಗೀತ, ನೃತ್ಯ, ಉತ್ಸವಗಳು ಮತ್ತು ಹಿರಿಯರಿಂದ ಬಂದ ಮೌಲ್ಯಗಳ ಸಮಗ್ರ ರೂಪವಾಗಿದೆ. ಪೀಳಿಗೆಯಿಂದ ಪೀಳಿಗೆಗೆ ಸಾಗಿಬರುವ ಈ ಮೌಲ್ಯಗಳು ಮತ್ತು ಸಂಪ್ರದಾಯಗಳೇ ನಮ್ಮ ಸಾಂಸ್ಕೃತಿಕ ಪರಂಪರೆಯಾಗಿದೆ ಎಂದು ಅವರು ತಿಳಿಸಿದರು.

ಭಾರತವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಮಹಾನ್ ನಾಗರಿಕತೆ ಆಗಿದ್ದು, ಇಲ್ಲಿ ವಿವಿಧ ಧರ್ಮಗಳು, ಭಾಷೆಗಳು ಮತ್ತು ಸಂಪ್ರದಾಯಗಳು ಒಂದೇ ದೇಶದಲ್ಲಿ ಒಟ್ಟಾಗಿ ಬೆಳೆಯುತ್ತಿರುವುದು ವೈವಿಧ್ಯತೆಯಲ್ಲಿನ ಏಕತೆಯ ಪ್ರತೀಕವಾಗಿದೆ ಎಂದು ಹೇಳಿದರು.

ರಾಷ್ಟ್ರೀಯತೆ ಎಂದರೆ ದೇಶದ ಬಗ್ಗೆ ಇರುವ ಪ್ರೀತಿ, ಗೌರವ ಮತ್ತು ಹೊಣೆಗಾರಿಕೆಯಾಗಿದೆ. ದೇಶದ ಸಂಸ್ಕೃತಿ, ಪರಂಪರೆ, ಇತಿಹಾಸ ಮತ್ತು ಮೌಲ್ಯಗಳನ್ನು ಗೌರವಿಸಿ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹಾನ್ ನಾಯಕರು ತ್ಯಾಗ ಮಾಡಿದ್ದಾರೆ; ಅವರ ಫಲವಾಗಿ ನಾವು ಇಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ರಾಷ್ಟ್ರೀಯತೆ ಎಂದರೆ ಕೇವಲ ಧ್ವಜಕ್ಕೆ ಗೌರವ ಕೊಡುವುದು ಅಥವಾ ರಾಷ್ಟ್ರಗೀತೆ ಹಾಡುವುದಷ್ಟೇ ಅಲ್ಲ, ದೇಶದ ಅಭಿವೃದ್ಧಿಗೆ ಕೈಜೋಡಿಸುವುದೂ ಆಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಡಾ. ಜೈಶೀಲ ಅವರು ಮಾತನಾಡಿ, ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರೀಯತೆ ಕುರಿತಾಗಿ ವಿದ್ಯಾರ್ಥಿಗಳಿಗೆ ಉಪದೇಶ ನೀಡಿದರು. ಆಧುನಿಕ ಯುಗದಲ್ಲಿ ಯುವಕರು ತಪ್ಪು ದಾರಿಯಲ್ಲಿ ಸಾಗದಂತೆ ಜಾಗರೂಕರಾಗಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಬಿಸಿಎ ವಿಭಾಗದ ಡಾ.ಸುರೇಂದ್ರ ಸಿಂಗ್, ಡಾ.ಹಾಲಪ್ಪಗೋಳ ಪ್ರಧವಿರಾಜ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.