
ಯಾದಗಿರಿ: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ತ್ವರಿತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ಸೆಪ್ಟೆಂಬರ್ ೧೨ರಂದು ಮೂರನೇ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗುತ್ತಿದೆ ಎಂದು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಮರುಳಸಿದ್ದರಯ್ಯ ತಿಳಿಸಿದರು.
ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುವುದರಿಂದ ಕಕ್ಷಿದಾರರ ಸಮಯ ಹಾಗೂ ಹಣ ಉಳಿತಾಯವಾಗಲಿದೆ. ಹೀಗಾಗಿ ರಾಜಿ ಮಾಡಿಕೊಳ್ಳಲು ಅವಕಾಶವಿರುವ ಪ್ರಕರಣಗಳ ಕುರಿತು ಕಕ್ಷಿದಾರರು ಹಾಗೂ ವಕೀಲರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಜುಲೈನಲ್ಲಿ ನಡೆದ ಎರಡನೇ ರಾಷ್ಟ್ರೀಯ ಲೋಕ ಅದಾಲತ್‌ಗೆ ಜಿಲ್ಲೆಯಲ್ಲಿ ೩೦,೭೬೩ ಪ್ರಕರಣಗಳನ್ನು ಗುರುತಿಸಲಾಗಿತ್ತು. ಈ ಪೈಕಿ ೭,೫೬೭ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿತ್ತು. ಈ ಬಾರಿ ಹೆಚ್ಚಿನ ಪ್ರಕರಣಗಳನ್ನು ರಾಜಿ ಮೂಲಕ ಮುಕ್ತಾಯಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಲೋಕ ಅದಾಲತ್‌ಗೆ ಸಿದ್ಧತೆ ಕೈಗೊಂಡಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಪ್ರತಿದಿನ ನ್ಯಾಯಾಲಯದ ಕಲಾಪ ಮುಗಿದ ಬಳಿಕ ರಾಜಿ ಸಂಧಾನ ಸಭೆ ನಡೆಸುತ್ತಿದ್ದಾರೆ. ದಿನಕ್ಕೆ ಸರಾಸರಿ ಐದು ಪ್ರಕರಣಗಳನ್ನು ಇತ್ಯರ್ಥಪಡಿಸಲು ಪ್ರಯತ್ನಿಸಲಾಗುತ್ತಿದೆ. ಪ್ರಕರಣಗಳ ಪ್ರಗತಿಯನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿಯಮಿತವಾಗಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
‘ಮಧ್ಯಸ್ಥಿಕೆ ಡ್ರೈವ್-೩.೦’ ಅಡಿಯಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿರುವ ೨೧೩ ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪೈಕಿ ಸುಮಾರು ೪೦ ಪ್ರಕರಣಗಳಲ್ಲಿ ಈಗಾಗಲೇ ಸಂಧಾನ ಯಶಸ್ವಿಯಾಗಿದೆ. ಉಳಿದ ಪ್ರಕರಣಗಳಲ್ಲಿಯೂ ಕಕ್ಷಿದಾರರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದರು.
ನ್ಯಾಯಾಲಯದಲ್ಲಿ ಪ್ರತಿದಿನ ವಿಚಾರಣೆಗೆ ಬರುವ ೫೦ರಿಂದ ೬೦ ಪ್ರಕರಣಗಳ ಪೈಕಿ ರಾಜಿ ಸಾಧ್ಯತೆ ಇರುವ ಪ್ರಕರಣಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ. ಬಳಿಕ ನ್ಯಾಯಾಧೀಶರು ವಕೀಲರೊಂದಿಗೆ ಚರ್ಚಿಸಿ, ಅಗತ್ಯವಿದ್ದಲ್ಲಿ ಕಕ್ಷಿದಾರರನ್ನು ಕರೆಸಿ ಪರಸ್ಪರ ಒಪ್ಪಿಗೆಯ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವ ಸಾಧ್ಯತೆ ಕುರಿತು ತಿಳಿಸಲಾಗುತ್ತದೆ ಎಂದು ಹೇಳಿದರು.
ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಕಕ್ಷಿದಾರರ ಒಪ್ಪಿಗೆ ಹಾಗೂ ಇಚ್ಛೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅಗತ್ಯವಿದ್ದರೆ ೬೦ ದಿನಗಳವರೆಗೆ ಚರ್ಚೆ ನಡೆಸಿ ರಾಜಿ ಸಂಧಾನಕ್ಕೆ ಅವಕಾಶವಿದೆ. ಲೋಕ ಅದಾಲತ್‌ನಲ್ಲಿಯೂ ಎರಡೂ ಪಕ್ಷಗಳ ಒಪ್ಪಿಗೆ ಪಡೆದೇ ಕಾನೂನಿನ ಚೌಕಟ್ಟಿನಲ್ಲಿ ಪ್ರಕರಣ ಇತ್ಯರ್ಥಪಡಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಸುಪ್ರೀಂ ಕೋರ್ಟ್ನಿಂದ ಜಿಲ್ಲೆಯಲ್ಲಿ ಗುರುತಿಸಲ್ಪಟ್ಟಿರುವ ೧೭ ಪ್ರಕರಣಗಳನ್ನು ಇತ್ಯರ್ಥಪಡಿಸಲು ವಿಶೇಷ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣಗಳಿಗೆ ಸಂಬAಧಿಸಿದAತೆ ಆಗಸ್ಟ್ ೨೧ರಿಂದ ೨೩ರವರೆಗೆ ವಿಶೇಷ ಲೋಕ ಅದಾಲತ್ ಪ್ರಕ್ರಿಯೆ ನಡೆಯಲಿದೆ.
ಈಗಾಗಲೇ ಒಂದು ಪ್ರಕರಣ ಇತ್ಯರ್ಥಗೊಂಡಿದ್ದು, ಉಳಿದ ೧೬ ಪ್ರಕರಣಗಳಲ್ಲಿಯೂ ರಾಜಿ ಸಂಧಾನಕ್ಕೆ ಪ್ರಯತ್ನ ಮುಂದುವರಿದಿದೆ. ರಾಜಿಯಾಗುವ ಸಾಧ್ಯತೆ ಹೆಚ್ಚಿರುವ ಪ್ರಕರಣಗಳನ್ನು ಗುರುತಿಸಿ, ಸಂಬAಧಪಟ್ಟ ಕಕ್ಷಿದಾರರೊಂದಿಗೆ ನಿರಂತರವಾಗಿ ಮಾತುಕತೆ ನಡೆಸಲಾಗುತ್ತಿದೆ ಎಂದು ನ್ಯಾಯಾಧೀಶರು ಹೇಳಿದರು.
ಸಿವಿಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ರಾಜಿಯಾಗಬಹುದಾದ ಸಣ್ಣಪುಟ್ಟ ಕ್ರಿಮಿನಲ್ ಪ್ರಕರಣಗಳು, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು, ಸಾರಿಗೆ ಸಂಬAಧಿತ ಪ್ರಕರಣಗಳು, ರಸ್ತೆ ಅಪಘಾತ ಪರಿಹಾರ ಪ್ರಕರಣಗಳು, ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ವಸೂಲಾತಿಗೆ ಸಂಬAಧಿಸಿದ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು.
ಲೋಕ ಅದಾಲತ್‌ನಲ್ಲಿ ತಮ್ಮ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸುವ ಕಕ್ಷಿದಾರರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು. ಎದುರುದಾರರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಎರಡೂ ಪಕ್ಷಗಳೊಂದಿಗೆ ಚರ್ಚಿಸಿ ರಾಜಿ ಸಂಧಾನದ ಮೂಲಕ ಪ್ರಕರಣ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಕ್ಷಿದಾರರು ಹಾಗೂ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಷ್ಟ್ರೀಯ ಲೋಕ ಅದಾಲತ್‌ನ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.






























