ನ್ಯಾಷನಲ್ ಹೆರಾಲ್ಡ್ ಪ್ರಕರಣ ವಜಾ: ಯುವ ಕಾಂಗ್ರೆಸ್ ಸಂಭ್ರಮ

ತುಮಕೂರು, ಡಿ. ೧೯- ದೆಹಲಿ ಹೈಕೋರ್ಟ್ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಖಾಸಗಿ ದೂರನ್ನು ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಲಾಹಿ ಸಿಖಂದರ್ ಹಾಗೂ ಯುವ ಕಾಂಗ್ರೆಸ್ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ನಿಖಿಲ್ ರಾಜಣ್ಣ ಅವರ ನೇತೃತ್ವದಲ್ಲಿ ನಗರದ ಟೌನ್‌ಹಾಲ್ ವೃತ್ತದ ಅಂಬೇಡ್ಕರ್ ಪ್ರತಿಮೆ ಮುಂದೆ ವಿಜಯೋತ್ಸವ ಆಚರಿಸಲಾಯಿತು.


ನಂತರ ಯುವ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.


ಈ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ಮುಖಂಡ ಇಲಾಹಿ ಸಿಖಂದರ್, ನಮ್ಮ ನಾಯಕರಾದ ರಾಹುಲ್‌ಗಾಂಧಿ, ಸೋನಿಯಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ಪಕ್ಷ ನಡೆಸುತ್ತಿದ್ದ ದ್ವೇಷದ ರಾಜಕಾರಣಕ್ಕೆ ದೆಹಲಿ ಹೈಕೋರ್ಟ್ ತೀರ್ಪು ಸರಿಯಾದ ಬರೆ ಎಳೆದಿದೆ. ಇದು ಸತ್ಯಕ್ಕೆ ದೊರೆತ ಜಯವಾಗಿದೆ. ಸಂವಿಧಾನದ ಅಡಿಯಲ್ಲಿ ಕಾಂಗ್ರೆಸ್ ಪಕ್ಷ ನಡೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.


ಸ್ವಾತಂತ್ರ್ಯ ಚಳವಳಿಗೆ ಬೆನ್ನೆಲುಬಾಗಿ ನಿಂತ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಇತಿಹಾಸವನ್ನು ಅರಿಯದೆ, ಕಾಂಗ್ರೆಸ್ ಮುಖಂಡರಾದ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಈ ಪ್ರಕರಣವನ್ನು ಬಳಸಿಕೊಂಡು ಇನ್ನಿಲ್ಲದ ಕಿರುಕುಳ ನೀಡಿ, ಪಕ್ಷವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದ್ದಲ್ಲದೆ, ಓಟ್ ಚೋರಿಯಂತಹ ಪ್ರತಿಭಟನೆಯಿಂದ ದೇಶದಲ್ಲಿ ಅತ್ಯಂತ ಮುಜುಗರಕ್ಕೆ ಒಳಗಾಗಿರುವ ಬಿಜೆಪಿ, ದೆಹಲಿ ಹೈಕೋರ್ಟ್‌ನಲ್ಲಿ ಖಾಸಗಿ ದೂರು ಸಲ್ಲಿಸುವ ಮೂಲಕ ಜೈಲಿಗೆ ಅಟ್ಟುವ ಹುನ್ನಾರ ನಡೆಸಿತ್ತು.ಆದರೆ ಇದಕ್ಕೆ ಅವಕಾಶ ನೀಡದೆ ನ್ಯಾಯಾಲಯ ಕೇಸನ್ನು ವಜಾಗೊಳಿಸುವ ಮೂಲಕ ಬಿಜೆಪಿಗೆ ಕಪಾಳಮೋಕ್ಷ ಮಾಡಿದೆ ಎಂದರು.


ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿಖಿಲ್ ರಾಜಣ್ಣ ಮಾತನಾಡಿ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ತೀರ್ಪು ದೇಶದಲ್ಲಿ ನ್ಯಾಯವನ್ನು ಎತ್ತಿ ಹಿಡಿದಿದೆ. ನ್ಯಾಯಾಂಗ ಹೆಸರಿನಲ್ಲಿ ವ್ಯಕ್ತಿ ಮತ್ತು ಪಕ್ಷವನ್ನು ಕುಗ್ಗಿಸುವ ಪ್ರಯತ್ನಕ್ಕೆ ಕೊಡಲಿ ಪೆಟ್ಟು ನೀಡಿದೆ. ನಾವು ಈ ತೀರ್ಪನ್ನು ಸ್ವಾಗತಿಸುತ್ತಾ, ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಧಿಕ್ಕಾರ ಹಾಕುತ್ತೇವೆ. ಸುಳ್ಳು ಬಹುಬೇಗ ಜನರ ನಡುವೆ ಹೋಗುತ್ತದೆ. ಆದರೆ ಸತ್ಯ ತಡವಾದರೂ ನಿಖರ ಎಂಬುದಕ್ಕೆ ನಿನ್ನೆಯ ತೀರ್ಪು ಸಾಕ್ಷಿಯಾಗಿದೆ. ಇನ್ನಾದರೂ ಕೇಂದ್ರದ ಬಿಜೆಪಿ ಸರ್ಕಾರ ವಿರೋಧ ಪಕ್ಷಗಳ ಮೇಲೆ ಕತ್ತಿ ಮಸೆಯದೆ, ಸೌಹಾರ್ದ ರೀತಿಯಲ್ಲಿ ಕೆಲಸ ಮಾಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಯೂತ್ ಕಾಂಗ್ರೆಸ್ ಸಕ್ರಿಯವಾಗಿ ಕೆಲಸ ಮಾಡಲಿದೆ ಎಂದರು.


ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್‌ನ ಹಲವಾರು ಮುಖಂಡರು ಪಾಲ್ಗೊಂಡಿದ್ದರು.