
ಬೀದರ್: ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಐದನೇ ರಾಷ್ಟ್ರೀಯ ಹಿರಿಯ ಕ್ರೀಡಾಪಟುಗಳ ಕ್ರೀಡಾಕೂಟದಲ್ಲಿ ಬೀದರನ ಮಮಿತಾಬಾಯಿ ಕದ್ರೆ ಮೂರು ಚಿನ್ನದ ಪದಕ ಸೇರಿ ಐದು ಪದಕಗಳನ್ನು ಜಯಿಸಿ ಸಾಧನೆ ಮಾಡಿದ್ದಾರೆ.
40 ರಿಂದ 45 ವರ್ಷದ ಒಳಗಿನವರ ವಿಭಾಗದ 10 ಕಿ.ಮೀ. ಓಟ, 5 ಕಿ.ಮೀ. ಓಟ, 4 ಇಂಟು 4 ರಿಲೇದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ, 1,500 ಮೀ. ಓಟ ಮತ್ತು 3 ಕಿ.ಮೀ. ನಡಿಗೆಯಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕಗಳನ್ನು ಬಾಚಿಕೊಂಡಿದ್ದಾರೆ.
ವೆಟರನ್ಸ್ ಸ್ಪೋಟ್ರ್ಸ್ ಆಯಿಂಡ್ ಗೇಮ್ಸ್ ನ್ಯಾಷನಲ್ ಫೌಂಡೇಷನ್ ವತಿಯಿಂದ ಅಕ್ಟೋಬರ್ 7 ರಿಂದ 11 ರ ವರೆಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ದೇಶದ ವಿವಿಧ ರಾಜ್ಯಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಬೀದರನವರಾದ ಮಮಿತಾಬಾಯಿ ಕದ್ರೆ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಖ್ಯ ವೀಕ್ಷಕಿಯಾಗಿದ್ದಾರೆ.
ವೃತ್ತಿಯ ಜತೆಗೆ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಪದಕ ಗೆದ್ದು ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಜಿಲ್ಲೆಗೆ ಕೀರ್ತಿ ತಂದಿದ್ದಾರೆ.




















