Home ಜಿಲ್ಲೆ ಕಲಬುರಗಿ ಸಿಯುಕೆಯ ಡಾ.ಶಿವಾನಂದ ಬಂಟನೂರರಿಗೆ ರಾಷ್ಟ್ರೀಯ ಫೆಲೋಶಿಪ್ ಗೌರವ

ಸಿಯುಕೆಯ ಡಾ.ಶಿವಾನಂದ ಬಂಟನೂರರಿಗೆ ರಾಷ್ಟ್ರೀಯ ಫೆಲೋಶಿಪ್ ಗೌರವ

ಕಲಬುರಗಿ,ಜು 2: ಕೇಂದ್ರ ಸರ್ಕಾರದ ಸಂಸ್ಕøತಿ ಸಚಿವಾಲಯವು ಕಲೆ ಮತ್ತು ಸಂಸ್ಕøತಿ ಕ್ಷೇತ್ರದಲ್ಲಿ ಪ್ರತಿಭಾವಂತ ಹಿರಿಯ ಕಲಾವಿದರಿಗೆ ನೀಡುವ ರಾಷ್ಟ್ರೀಯ ಫೇಲೋಶಿಪ್ ಪ್ರಶಸ್ತಿಗೆ 2025-26 ನೇ ಸಾಲಿನಲ್ಲಿ “ಶಿಲ್ಪಕಲೆ” ವಿಭಾಗದಿಂದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತ ಕಲೆಗಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಾನಂದ ಬಂಟನೂರು ಅವರಿಗೆ ಪ್ರತಿಷ್ಠಿತ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಕಲ್ಲು, ಕಟ್ಟಿಗೆ, ಲೋಹ ಹಾಗೂ ಇತರ ಜಡ ವಸ್ತುಗಳಿಗೆ ಜೀವ ತುಂಬುವ ಅಪರೂಪದ ಕಲಾ ಸಾಮಥ್ರ್ಯ ಹೊಂದಿರುವ ಡಾ.ಶಿವಾನಂದ ಬಂಟನೂರ ಅವರು, ತಮ್ಮ ಶಿಲ್ಪ ಕಲೆಗಳ ಮೂಲಕ ಸಮಾಜದ ವಾಸ್ತವತೆ, ಮಾನವೀಯ ಮೌಲ್ಯಗಳು, ಹಸಿವು, ನೋವು, ಅಸಮಾನತೆ, ಹೋರಾಟ ಮತ್ತು ಬದುಕಿನ ಅನೇಕ ಮುಖಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾರೆ. ಅವರ ಪ್ರತಿಯೊಂದು ಶಿಲ್ಪವೂ ಕೇವಲ ಕಲಾಕೃತಿಯಾಗಿರದೆ, ಸಮಾಜವನ್ನು ಚಿಂತನೆಗೆ ಹಚ್ಚುವ ದೃಶ್ಯಕಾವ್ಯವಾಗಿ ಗಮನ ಸೆಳೆಯುತ್ತದೆ.
ಕಲಾವಿದರಾಗಿ ಮಾತ್ರವಲ್ಲದೆ ಕಳೆದ ಮೂರು ದಶಕಗಳಿಂದ ಕಲಾ ಆಸಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ, ತರಬೇತಿಯನ್ನು ನೀಡುತ್ತಾ ಹಾಗೂ ಇಂದಿನ ಅನೇಕ ಯುವ ಕಲಾವಿದರಿಗೆ ಇವರು ಪ್ರೇರಣೆಯಾಗಿದ್ದಾರೆ. ತಮ್ಮ ಕಲಾಸಾಧನೆಯ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಾಮಾಜಿಕ ಜವಾಬ್ದಾರಿ ಹಾಗೂ ಕಲೆಯ ಮೇಲಿನ ಬದ್ಧತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ.
ಈ ಫೆಲೋಶಿಪ್ ಅಡಿಯಲ್ಲಿ ಡಾ. ಶಿವಾನಂದ ಬಂಟನೂರು ಅವರಿಗೆ ತಿಂಗಳಿಗೆ 25 ಸಾವಿರ ರೂಗಳಂತೆ ಎರಡು ವರ್ಷಗಳವರೆಗೆ ಆರ್ಥಿಕ ನೆರವು ಲಭಿಸಲಿದೆ. ಈ ಫೆಲೋಶಿಪ್‍ನಲ್ಲಿ ರಾಜ್ಯದ ಶಿಲ್ಪಕಲೆಯ ಸೃಷ್ಟಿ, ಸಂರಕ್ಷಣೆ ಹಾಗೂ ಶಿಲ್ಪಕಲೆಗಳ ಕುರಿತಾದ ಆಳವಾದ ಅಧ್ಯಯನ ಮತ್ತು ಸಂಶೋಧನೆಗಳನ್ನು ಕೈಗೊಳ್ಳಲು ಮಹತ್ವದ ಸಹಕಾರಿಯಾಗಲಿದೆ. ಫೆಲೋಶಿಪ್‍ನ ನಿಯಮಾನುಸಾರ ಪ್ರತಿ ಆರು ತಿಂಗಳಿಗೊಮ್ಮೆ ಶಿಲ್ಪಕಲೆ ಕುರಿತ ಸಂಶೋಧನಾ ಪ್ರಗತಿ ವರದಿಯನ್ನು ಕೇಂದ್ರ ಸಂಸ್ಕøತಿ ಸಚಿವಾಲಯಕ್ಕೆ ಸಲ್ಲಿಸಲಾಗುವುದು ಎಂದು ಡಾ. ಶಿವಾನಂದ ಬಂಟನೂರು ತಿಳಿಸಿದ್ದಾರೆ.
ಡಾ. ಶಿವಾನಂದ ಬಂಟನೂರ ಅವರ ದೀರ್ಘಕಾಲದ ಕಲಾ ಸಾಧನೆ, ಸೃಜನಶೀಲತೆ ಹಾಗೂ ಭಾರತೀಯ ಶಿಲ್ಪಕಲೆಗೆ ನೀಡಿರುವ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ, ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೇಂದ್ರ ಸಂಸ್ಕøತಿ ಸಚಿವಾಲಯವು “ಶಿಲ್ಪಕಲೆ” ವಿಭಾಗದಲ್ಲಿ ರಾಷ್ಟ್ರೀಯ ಫೆಲೋಶಿಪ್ ನೀಡಿ ಗೌರವಿಸಿರುವುದನ್ನು ಕರ್ನಾಟಕ ಕೇಂದ್ರೀಯ ವಿ.ವಿ.ಯ ಕುಲಪತಿ ಪ್ರೊ ಬಟ್ಟು ಸತ್ಯನಾರಾಯಣ ಅವರು ಹೃದಯಪೂರ್ವಕ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಶುಭಕೋರುತ್ತಾ, ಈ ಶಿಲ್ಪಕಲಾ ಕ್ಷೇತ್ರದಲ್ಲಿ ಡಾ.ಬಂಟನೂರು ಅವರು ಬಹುದೊಡ್ಡ ಸಾಧನೆ ಮಾಡಿದ್ದಾರೆ. ಯುವ ಸಮುದಾಯಕ್ಕೆ ಒಬ್ಬ ಆದರ್ಶ ವ್ಯಕ್ತಿಯಾಗಿದ್ದಾರೆ. ಅವರ ಸಾಧನೆ ನಿರಂತರವಾಗಿರಲಿ ಎಂದು ಹಾರೈಸಿ, ಈ ಸಾಧನೆಯು ನಮ್ಮ ವಿ.ವಿ.ಗೆ ಅತ್ಯಂತ ಹೆಮ್ಮೆಯ ಸಂಗತಿ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ,ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ.ವಿಕ್ರಮ ವಿಸಾಜಿ ಸೇರಿದಂತೆ ಸಂಗೀತ ಮತ್ತು ಲಲಿತ ಕಲೆಗಳ ವಿಭಾಗದ ಪ್ರಾಧ್ಯಾಪಕರು ವಿವಿಧ ವಿಭಾಗಗಳ ಡೀನರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಕಲಾ ವಿದ್ಯಾರ್ಥಿಗಳು ಡಾ.ಶಿವಾನಂದ ಬಂಟನೂರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.