
ಕಲಬುರಗಿ :ಮೇ.2: ನಾರದ ಮಹರ್ಷಿಗಳು ಹಿಂದೂ ಪುರಾಣಗಳಲ್ಲಿ ಬ್ರಹ್ಮದೇವನ ಮಾನಸಪುತ್ರ, ಶ್ರೀವಿಷ್ಣುವಿನ ಪರಮ ಭಕ್ತ ಮತ್ತು ತ್ರಿಲೋಕ ಸಂಚಾರಿ ಋಷಿ. ಕೈಯಲ್ಲಿ ವೀಣೆ ಹಿಡಿದು, ‘ನಾರಾಯಣ ನಾರಾಯಣ’ ಎಂದು ಜಪಿಸುತ್ತಾ, ಜ್ಞಾನ ಮತ್ತು ಸುದ್ದಿಗಳನ್ನು ಹಂಚುವ ನಾರದರನ್ನು ವಿಶ್ವದ ಮೊದಲ ಸಂವಹನಕಾರ ಅಥವಾ ಪತ್ರಕರ್ತ ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅವರು ಸುದ್ದಿಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪಿಸಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು. ನಗರದ ಖಾದ್ರಿ ಚೌಕ ನಲ್ಲಿನ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ನಾರದ ದೇವರ್ಷಿಯವರ ಜಯಂತಿ” ಯಲ್ಲಿ ಅವರು ಮಾತನಾಡುತ್ತಿದ್ದರು. ನಾರದರು ದೇವಲೋಕ, ಮತ್ರ್ಯಲೋಕ (ಭೂಮಿ) ಮತ್ತು ಪಾತಾಳ ಲೋಕಗಳಲ್ಲಿ ನಿರಂತರವಾಗಿ ಸಂಚರಿಸುತ್ತಿರುತ್ತಾರೆ. ಅವರು ವಿಷ್ಣುವಿನ ಕಟ್ಟಾ ಭಕ್ತರು. ಸರಸ್ವತಿಯಿಂದ ಸಂಗೀತವನ್ನು ಕಲಿತವರು ಎಂದು ನಂಬಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಚಿಂತಕ ಶಿವಯೋಗೆಪ್ಪಾ ಎಸ್. ಬಿರಾದಾರ, ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್, ಸ್ನೇಹಾ ಚೌಹಾಣ, ರುಕ್ಸಾನಾ ಪಟೇಲ್ ಹಾಗೂ ವಿದ್ಯಾರ್ಥಿಗಳು ಇದ್ದರು.


























