ನಮ್ಮ ಕರ್ನಾಟಕ ಸೇನೆ 3ನೇ ವಾರ್ಷಿಕೋತ್ಸವ ಭಿತ್ತಿಪತ್ರ ಬಿಡುಗಡೆ, ಪಾಲ್ಗೊಳ್ಳಲು ವಿಶ್ವಾರಾಧ್ಯ ದಿಮ್ಮೆ ಮನವಿ

ಯಾದಗಿರಿ:ಡಿ.1: ನಮ್ಮ ಕರ್ನಾಟಕ ಸೇನೆ 3ನೇ ವಾರ್ಷಿಕೋತ್ಸವ ಬರುವ ಜನವರಿ 18 ರಂದು ಬೆಂಗಳೂರಿನಲ್ಲಿ ಜರುಗುವ ಹಿನ್ನೆಲೆಯಲ್ಲಿ ಸಮಾರಂಭದ ಭಿತ್ತಿ ಪತ್ರಗಳನ್ನು ಶಹಾಪೂರ ತಾಲ್ಲೂಕಿನ ಭೀಮರಾಯನಗುಡಿ ಪ್ರವಾಸಿ ಮಂದಿರದಲ್ಲಿ ರಾಜ್ಯ ಪ್ರಧಾನ ಸಂಚಾಲಕರಾದ ಭೀಮಣ್ಣ ಶಖಾಪುರ ಹಾಗೂ ಜಿಲ್ಲಾಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಾರಂಭದಲ್ಲಿ ನಾಡಿನ ಹರಗುರು ಚರಮೂರ್ತಿಗಳು, ಖ್ಯಾತನಾಮರು, ಕನ್ನಡ ಚಿತ್ರರಂಗದ ನಟ ನಟಿಯರು ಆಗಮಿಸಲಿದ್ದು, ಸಮಾರಂಭ ವೈಭವದಿಂದ ಜರುಗಲಿದೆ. ಭವ್ಯ ಸಮಾರಂಭಕ್ಕೆ ಜಿಲ್ಲೆಯ ಎಲ್ಲ ತಾಲ್ಲೂಕು ಹಾಗೂ ಜಿಲ್ಲಾ ಪದಾಧಿಕಾರಿಗಳು ತಮ್ಮ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಕನ್ನಡ ನಾಡು ನುಡಿ ನೆಲ ಜಲ ರಕ್ಷಣೆ ವಿಷಯದಲ್ಲಿ ರಾಜಿರಹಿತ ಹೋರಾಟಕ್ಕೆ ಮುಂದಾಗಿರುವ ರಾಜ್ಯಾಧ್ಯಕ್ಷ ಬಸವರಾಜ ಪಡುಕೋಟೆ ನೇತೃತ್ವದ ಸಂಘಟನೆ ಅಲ್ಪಕಾಲದಲ್ಲಿಯೇ ದಾಪುಗಾಲು ಇಡುತ್ತಿದ್ದು, ಸಂಘಟನೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಸೇನಾನಿಗಳು ಬರುವ ವರ್ಷದ ಆರಂಭದಲ್ಲಿ ಬೆಂಗಳೂರಿನಲ್ಲಿ ನಡೆಯುವ ಈ ಅದ್ದೂರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಈಗಾಗಲೇ ಜಿಲ್ಲೆಯಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಂಡ ಕಾರ್ಯಕರ್ತರು ಹಾಗೂ ಹೊಸದಾಗಿ ಸೇರ್ಪಡೆಯಾದವರು ಎಲ್ಲರೂ ಕನ್ನಡಮ್ಮನ ಕಾರ್ಯಕದಲ್ಲಿ ಕಂಕಣಬದ್ದರಾಗಿ ದುಡಿಯಬೇಕೆಂದು ನುಡಿದರು.

ಇದೇ ಸಂದರ್ಭದಲ್ಲಿ ಸಂಘಟನೆಯ ವಿವಿಧ ಪದಾಧಿಕಾರಿಗಳಿಗೆ ನೇಮಕ ಮಾಡಿ ಆದೇಶ ಪತ್ರ ವಿತರಿಸಲಾಯಿತು. ಪದಾಧಿಕಾರಿಗಳಾಗಿ: ವಿಶ್ವಾರಾಧ್ಯರಡ್ಡಿ ದೇಸಾಯಿ (ಶಹಾಪೂರ ತಾ. ರೈತ ಘಟಕ ಅಧ್ಯಕ್ಷ), ಶೇಖಣ್ಣ ಕೊಡ್ಲಿ (ಶಹಾಪೂರ ತಾಲ್ಲೂಕು ಯುವ ಅಧ್ಯಕ್ಷ), ರಾಜು ಮ್ಯಾಗಿನಮನಿ (ವಡಗೇರಿ ತಾ. ಯುವ ಘಟಕದ ಅಧ್ಯಕ್ಷ) ಆಯ್ಕೆಯಾದರು.

ಸಭೆಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕು. ಶ್ರೀದೇವಿ ಕಟ್ಟಿಮನಿ, ಶಹಾಪೂರ ತಾ. ಅಧ್ಯಕ್ಷ ಸಿದ್ದು ಪಟ್ಟೇದಾರ, ವಡಗೇರಿ ತಾ. ಗೌರವಾಧ್ಯಕ್ಷ ನಾಗರಡ್ಡಿ ರಾಮನಾಳ, ಅಧ್ಯಕ್ಷ ಮಲ್ಲು ಹಾಲಗೇರಿ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಇದ್ದರು.