ಉದ್ಯೋಗ ಖಾತ್ರಿ ಪಟ್ಟಿಯಿಂದ ಹೆಸರು ಕಡಿತತಾಪಂ ಕಚೇರಿಯ ಮುಂದೆ ಮಲಗಿ ಕೂಲಿಕಾರ್ಮಿಕ ಪ್ರತಿಭಟನೆ

ಆಳಂದ:ಅ.30:ನನ್ನ ಹೆಸರನ್ನು ಉದ್ಯೋಗ ಪಟ್ಟಿಗೆ ಸೇರಿಸಿ, ಕೆಲಸಕ್ಕೆ ಕೊಡಿ ಈ ಕಣ್ಣೀರಿನ ಕೂಗು ಆಳಂದ ತಾಲೂಕಿನ ಮೋಘ(ಕೆ ) ಗ್ರಾಮದ ಬಡ ಕೂಲಿ ಕಾರ್ಮಿಕ ಗುರುಶಾಂತ್ ನಿಂಗದಳ್ಳಿ ಅವರದು. ಕಳೆದ ಎರಡು ವರ್ಷಗಳಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ.ಜಿ.ಎನ್.ಆರ್.ಇ.ಜಿ.)ಯಡಿ ತನ್ನ ಹೆಸರು ಕಡಿತಗೊಂಡ ನಂತರ, ಅಧಿಕಾರಿಗಳ ಕಚೇರಿಗಳ ಬಾಗಿಲು ತಟ್ಟುತ್ತಿದ್ದ ಈ ಕಾರ್ಮಿಕನ ಧ್ವನಿ ಯಾರಿಗೂ ಕೇಳಿಸದೇ ಹೋಗಿದೆ.
ಬುಧವಾರ ಬೆಳಿಗ್ಗೆ ಆಳಂದ ತಾಲೂಕು ಪಂಚಾಯಿತಿ ಕಚೇರಿಯ ಎದುರು ಗುರುಶಾಂತ್ ತಮ್ಮ ಹಳೆಯ, ಹರಿದುಹೋದ ಜಾಬ್‍ಕಾರ್ಡ್‍ನೊಂದಿಗೆ ಮಲಗಿಕೊಂಡು ಪ್ರತಿಭಟನೆ ನಡೆಸಿದರು. ಅವರ ಈ ಕಣ್ಣೀರಿನ ಪ್ರತಿಭಟನೆಯ ದೃಶ್ಯವನ್ನು ಕಂಡ ನಾಗರಿಕರು ಕಳಕಳಿಯಿಂದ ತತ್ತರಿಸಿದರು. “ಎರಡು ವರ್ಷಗಳಿಂದ ಕಚೇರಿಯ ಚುಕ್ಕಾಣಿ ಸುತ್ತುತ್ತಿದ್ದರೂ ಅಧಿಕಾರಿಗಳ ಕಿವಿಗೆ ಕೂಗು ಬೀಳುತ್ತಿಲ್ಲ,” ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಕರ್ತರು ಸ್ಥಳಕ್ಕೆ ತೆರಳಿ ಗುರುಶಾಂತ್ ಅವರೊಂದಿಗೆ ಮಾತನಾಡಿದಾಗ, ಅವರ ಬದುಕಿನ ಹೋರಾಟ ಬಯಲಾಯಿತು. “ನಾನು ಕೂಲಿ ಕೆಲಸದಿಂದಲೇ ಜೀವನ ಸಾಗಿಸುತ್ತೇನೆ. ಆದರೆ ಜಾಬ್‍ಕಾರ್ಡ್ ಕಡಿತಗೊಂಡ ಬಳಿಕ ಯಾವುದೇ ಕೆಲಸ ಸಿಕ್ಕಿಲ್ಲ. ತಾಪಂ ಕಚೇರಿಗೆ ಪ್ರತಿ ವಾರ ಬರುತ್ತೇನೆ, ದೂರುಗಳನ್ನು ಕೊಡುತ್ತೇನೆ. ಆದರೂ ಯಾವುದೇ ಕ್ರಮ ಇಲ್ಲ. ಕೆಲಸ ಇಲ್ಲದೆ ಕುಟುಂಬದ ಹೊಟ್ಟೆ ಹಸಿದಿದೆ,” ಎಂದು ಕಣ್ಣೀರಿನಿಂದ ಗುರುಶಾಂತ್ ಹೇಳಿದರು.ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ಜನರಲ್ಲಿ ಆಕ್ರೋಶ ಮೂಡಿಸಿದೆ. “ಇದು ಗುರುಶಾಂತ್ ಅವರೊಬ್ಬರ ಸಮಸ್ಯೆ ಅಲ್ಲ. ಇದೇ ರೀತಿಯಾಗಿ ಹಲವಾರು ಕಾರ್ಮಿಕರು ಅಲೆದಾಡುತ್ತಿದ್ದಾರೆ. ಭ್ರಷ್ಟ ವ್ಯವಸ್ಥೆ ಮತ್ತು ರಾಜಕೀಯ ನಿರ್ಲಕ್ಷ್ಯದಿಂದ ಬಡವರ ಹಕ್ಕು ಕಾಗದದ ಮೇಲೆ ಮಾತ್ರ ಉಳಿದಿದೆ,” ಎಂದು ಸ್ಥಳೀಯ ನಾಗರಿಕ ಮಹೇಶ್ ಝಳಕಿ ಪತ್ರಕರ್ತರೊಂದಿಗೆ ಮಾತನಾಡಿ ಆಕ್ಷೇಪ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತರು ಈ ಘಟನೆ ಆಡಳಿತದ ಕಪಟತೆ ಬಯಲಾಯಿತೆಂದು ಅಭಿಪ್ರಾಯಪಟ್ಟಿದ್ದಾರೆ. “ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಬಡವರಿಗೆ ಬದುಕಿನ ಆಶಾಕಿರಣವಾಗಬೇಕಾದರೆ, ಈ ರೀತಿಯ ಘಟನೆಗಳು ಅದರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುತ್ತವೆ. ಅಧಿಕಾರಿಗಳು ಕಾಗದದ ವರದಿಗಳಿಗಿಂತ ಜೀವಂತ ಸಮಸ್ಯೆಗಳಿಗೆ ಸ್ಪಂದಿಸಬೇಕು,” ಎಂದು ಸಾಮಾಜಿಕ ಕಾರ್ಯಕರ್ತರು ಒತ್ತಿಹೇಳಿದರು.
ಆಳಂದದ ತಾಪಂ ಕಚೇರಿಯ ಬಾಗಿಲು ಮುಂದೆ ಬಡ ಕಾರ್ಮಿಕನ ಈ ಪ್ರತಿಭಟನೆ, ಗ್ರಾಮೀಣ ಬಡತನದ ನಿಜ ಮುಖವನ್ನೇ ಆಡಳಿತದ ಮುಂದೆ ತೆರೆದಿಟ್ಟಿದೆ. ಗುರುಶಾಂತ್ ಅವರ ಕಥೆ ಒಂದು ವ್ಯಕ್ತಿಯದು ಮಾತ್ರವಲ್ಲ – ಅದು ಸಾವಿರಾರು ಕಾರ್ಮಿಕರ ಪ್ರತಿನಿಧಿ ಕೂಗು ಇದಾಗಿದೆ ಈಗಲೂ ಕಾಲಮಿಂಚಿಲ್ಲ ಉದ್ಯೋಗ ಖಾತ್ರಿ ಕಾರ್ಮಿಕರ ಪಟ್ಟಿಯಿಂದ ಕಡಿತಗೊಂಡ ಹೆಸರುಗಳನ್ನು ಸೇರ್ಪಡೆಗೊಳಿಸುವ ಮೂಲಕ ಅಧಿಕಾರಿಗಳು ಕಾರ್ಮಿಕರ ನೆರವಿಗೆ ಬರಬೇಕು ಎಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ.