ವಿಮಾನ ನಿಲ್ದಾಣದಲ್ಲಿ ನಮಾಜ್ -ವಿವಾದಕ್ಕೆಡೆ

ಬೆಂಗಳೂರು, ನ. ೧೦- ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ನಮಾಜ್ ಮಾಡಿರುವ ವಿಡಿಯೋ ವೈರಲ್ ಆಗಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.


ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-೨ ಒಳಗಡೆ ಮುಸ್ಲಿಂ ಸಮುದಾಯದ ಕೆಲವರು ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ನಮಾಜ್ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಭದ್ರತೆ ನೋಡಿಕೊಳ್ಳುವ ಕೇಂದ್ರೀಯ ಭದ್ರತಾ ಪಡೆ ಯೋಧರು ಇರುವುದು ವಿಡಿಯೋದಲ್ಲಿ ಕಂಡು ಬಂದಿದೆ.


ಸಾರ್ವಜನಿಕ ಸ್ಥಳದಲ್ಲಿ ನಮಾಜ್‌ಗೆ ಅವಕಾಶ ಮಾಡಿಕೊಟ್ಟಿರುವುದುಕ್ಕೆ ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.


ಅನುಮತಿ ಪಡೆದರೂ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಆಕ್ಷೇಪ ತೆಗೆಯುತ್ತಿರುವವರು ಅತ್ಯಂತ ಭದ್ರತಾ ಪ್ರದೇಶವಾದ ವಿಮಾನ ನಿಲ್ದಾಣದಲ್ಲಿ ನಮಾಜ್ ನಡೆಸಲು ಅವಕಾಶ ಕೊಟ್ಟಿದ್ದಾರೆ. ವಿಮಾನ ನಿಲ್ದಾಣದ ಒಳಗೆ ನಮಾಜ್ ಮಾಡಲು ಅನುಮತಿ ಇದೆಯೇ ಎಂದು ರಾಜ್ಯ ಬಿಜೆಪಿ ವಕ್ತಾರ ವಿಜಯ್ ಪ್ರಸಾದ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.


ವಿಮಾನ ನಿಲ್ದಾಣದಲ್ಲಿ ಮಾಡಿರುವ ನಮಾಜ್‌ನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವ ಪ್ರಿಯಾಂಕ ಖರ್ಗೆ ಒಪ್ಪುವರೇ ಎಂದು ಅವರು ಪ್ರಶ್ನಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡಲು ಇವರೆಲ್ಲ ಪೂರ್ವಾನುಮತಿ ಪಡೆದಿದ್ದಾರೆಯೇ ಎಂದು ಪಬಿಜೆಪಿ ವಕ್ತಾರರು ಪ್ರಶ್ನಿಸಿ, ಸೂಕ್ಷ್ಮ ವಲಯದಲ್ಲಿ ನಡೆದಿರುವ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


ಗೃಹ ಸಚಿವರ ಪ್ರತಿಕ್ರಿಯೆ


ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್-೨ ನಲ್ಲಿ ನಮಾಜ್ ಮಾಡಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.